ಚಂದ್ರವಳ್ಳಿ ನ್ಯೂಸ್, ತುಮಕೂರು:
ಸಾಫ್ಟ್ವೇರ್ ಎಂಜಿನಿಯರ್ ಸುಮಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ದೊಡ್ಡಕೆರೆಯಲ್ಲಿ ನಡೆದಿದ್ದು ಯುವತಿಯ ಮೃತದೇಹ ಶುಕ್ರವಾರ ಪತ್ತೆಯಾಗಿದೆ.
ಕುಣಿಗಲ್ ತಾಲೂಕು ಸೊಬಗಾನಹಳ್ಳಿ ಗ್ರಾಮದ ನಿವಾಸಿ ಸುಮಾ(25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಸುಮಾ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಿಂದ ಹುಟ್ಟೂರಿಗೆ ಆಗಮಿಸಿದ್ದ ಸುಮಾ ನಂತರ ಕುಣಿಗಲ್ ದೊಡ್ಡಕೆರೆ ಬಳಿ ಅವರ ಬ್ಯಾಗ್, ಮೊಬೈಲ್, ಚಪ್ಪಲಿ ಹಾಗೂ ಬಸ್ ಟಿಕೆಟ್ ಪತ್ತೆಯಾಗಿತ್ತು.
ಕೆರೆಯಲ್ಲಿ ಯುವತಿಗಾಗಿ ಅಗ್ನಿಶಾಮಕ ಸಿಬ್ಬಂದಿ ನಿರಂತರ ಶೋಧ ಕಾರ್ಯ ನಡೆಸಿದ್ದು, ಶುಕ್ರವಾರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.