ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಇಬ್ಬರು ಕುಖ್ಯಾತ ಸರಗಳ್ಳರ ಬಂಧನವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬನ್ನೇರುಘಟ್ಟ ರಸ್ತೆಯ ಅರೆಕೆರೆಯ ನಿವಾಸಿ ಜಬಿವುದ್ದೀನ್ ಹಾಗೂ ಜಯನಗರದ ಮೊಹಮ್ಮದ್ ಮೆಹತಾಬ್ ಬಂಧಿತ ಆರೋಪಿಗಳಾಗಿದ್ದಾರೆ.
ಬೆಂಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಬ್ಬರೂ 11 ಬಾರಿ ಘೋಷಿತ ಅಪರಾಧಿಗಳಾಗಿದ್ದು, ಇವರ ವಿರುದ್ಧ 39 ಬಾರಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿತ್ತು. 2023ರಿಂದ ವಿಚಾರಣೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಇದೀಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಜಯನಗರದಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗ ಸಹಪಾಠಿಗಳಾಗಿದ್ದ ಇಬ್ಬರು ಮೋಜಿನ ಜೀವನಕ್ಕಾಗಿ 2014ರಲ್ಲಿ ಸರಗಳ್ಳತನ ಆರಂಭಿಸಿದ್ದರು. ಜಯನಗರ, ಜೆ.ಪಿ.ನಗರ ವಿಜಯನಗರ, ಬನಶಂಕರಿ, ಬಾಣಸವಾಡಿ ಸೇರಿದಂತೆ 33 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇವರ ವಿರುದ್ಧ ಸರಗಳ್ಳತನ ಪ್ರಕರಣ ದಾಖಲಾಗಿದೆ. 2023ರಲ್ಲಿ ರಾಜಗೋಪಾಲನಗರ ಹಾಗೂ ಮಲ್ಲೇಶ್ವರದಲ್ಲಿ ಸರಗಳ್ಳತನ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿ ಜಬಿವುದ್ದೀನ್ ವಿರುದ್ಧ 73 ಹಾಗೂ ಮೊಹಮ್ಮದ್ ವಿರುದ್ಧ 31 ಪ್ರಕರಣಗಳು ದಾಖಲಾಗಿವೆ. ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.
ಹಲವು ಬಾರಿ ಘೋಷಿತ ಅಪರಾಧಿ ಹಾಗೂ ಜಾಮೀನುರಹಿತ ವಾರೆಂಟ್ ಹೊರಡಿಸಿದರೂ ಕೋರ್ಟ್‌ಗೆ ಇಬ್ಬರು ಆರೋಪಿಗಳು ಗೈರಾಗಿದ್ದರು. ಆರೋಪಿಗಳ ಪತ್ತೆಗಾಗಿ ಇನ್‌ಸ್ಪೆಕ್ಟರ್ ದೀಪಕ್ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಯನಗರ ಪೊಲೀಸರ ಕಾರ್ಯಾಚರಣೆಗಾಗಿ 25 ಸಾವಿರ ರೂ.ನಗದು ಬಹುಮಾನವನ್ನು ನಗರ ಪೊಲೀಸ್ ಆಯುಕ್ತ ದಯಾನಂದ ಘೋಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.