ಯುವ ಸಮೂಹ ವಿಜ್ಞಾನದ ನಾಯಕತ್ವ ವಹಿಸುವುದು ಅಗತ್ಯ

News Desk

 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ;
ಭಾರತದ ಸಂಜಾತರಿಗೆ ಮಾತ್ರ ವಿಜ್ಞಾನದಲ್ಲಿ ಅನೇಕ ನೊಬೆಲ್ ಪ್ರಶಸ್ತಿಗಳು ದೊರೆತಿವೆ. ಆದರೆ ಇದುವರೆವಿಗೂ ಈ ದಶಕದಲ್ಲಿ ಸಿ.ವಿ.ರಾಮನ್ ರವರನ್ನು ಬಿಟ್ಟರೆ, ಬೇರೆ ಯಾವ ಭಾರತೀಯ ವಿಜ್ಞಾನಿಗೂ ನೊಬೆಲ್ ಪ್ರಶಸ್ತಿ ದೊರೆಯದಿರುವುದು ವಿಷಾದದ ಸಂಗತಿ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಹಾಗೂ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು.

   “ಭಾರತದ ಅನೇಕ ಸಂಶೋಧನಾ ಕೇಂದ್ರಗಳಲ್ಲಿ ಬೆರಳೆಣಿಕೆಯ ವಿಜ್ಞಾನಿಗಳು ಮಾತ್ರ ಸಂಶೋಧನೆಗಳಲ್ಲಿ  ತೊಡಗಿದ್ದಾರೆ. ಇದನ್ನು ಗಮನಿಸಿದರೆ, ಆಳವಾದ ಅಧ್ಯಯನ, ಸಂಶೋಧನೆಗಳು, ನಡೆಯುತ್ತಿಲ್ಲ ಹಾಗೂ ಬದ್ಧತೆಯ ಕೊರತೆ ಎದ್ದು ಕಾಣಿಸುತ್ತಿದೆ. ನಾವು ಬ್ರಿಟಿಷರ ದಾಸ್ಯದಲ್ಲಿದ್ದಾಗ ನೊಬೆಲ್ ಪ್ರಶಸ್ತಿ ಬಂದಿರುವುದು ಗಮನಾರ್ಹ. ಭಾರತದ ಅಭಿವೃದ್ಧಿಗೆ ರಾಮನ್ ಬೆಳಕಿನ ಪರಿಣಾಮ ಮಹತ್ವದ ಸಂಶೋಧನೆಯಾಗಿದೆ. ಇಂತಹ ಸಂಶೋಧನೆಯ ಮಹತ್ವ ಎಲ್ಲೆಡೆ ಪಸರಿಸಲಿ ಮತ್ತು ಇನ್ನಷ್ಟು ಹೊಸ ಸಂಶೋಧನೆಗಳು ನಡೆಯುವ ಉದ್ದೇಶದಿಂದ ರಾಷ್ಟ್ರೀಯ ವಿಜ್ಞಾನ ದಿನ ವನ್ನು ಆಚರಿಸಲು ತೀರ್ಮಾನಿಸಿದ್ದು ಸರಿಯಾಗಿಯೇ ಇದೆ” ಎಂದು ತಿಳಿಸಿದರು.

ಸಂಶೋಧನೆ ಮಾಡುವವರಲ್ಲಿ ಬದ್ಧತೆ ಇರಬೇಕು, ವಿಜ್ಞಾನದಿಂದ ಮಾತ್ರ ಬಡತನ, ದಾರಿದ್ರ್ಯವನ್ನು ತೊಲಗಿಸಲು ಸಾಧ್ಯ. ವಿಜ್ಞಾನವು ಎಲ್ಲರನ್ನೂ ಒಂದೆಡೆ ಸೇರಿಸುತ್ತದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದರಿಂದ ವೈಜ್ಞಾನಿಕ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು. ಇಂದಿನ ಸಂಶೋಧನೆಗಳು ಸೀಮಿತ ಚೌಕಟ್ಟಿನಲ್ಲಿ ನಡೆಯುತ್ತಿವೆ, ಹಿಂದಿನ ಸಂಶೋಧನೆಗಳಂತೆ, ವಿಭಿನ್ನ ವ್ಯಾಪ್ತಿಯನ್ನು ಹೊಂದಿಲ್ಲ. ಎಂದು ಹೇಳಿ, ಸಿ.ವಿ.ರಾಮನ್ ರವರ ಸಂಶೋಧನೆ ಅವರ ಕಾರ್ಯ ತತ್ಪರತೆ, ಅವರಿಗಿದ್ದ ಸಂಶೋಧನೆಗಳ ಆಳ ಅಧ್ಯಯನ, ಅವರು ಪಡೆದ ನೊಬೆಲ್ ಪ್ರಶಸ್ತಿ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟರು.

ಸೈನ್ಸ್ ಫೌಂಡೇಶನ್ ಅಧ್ಯಕ್ಷ ಡಾ.  ಜಿ.ಎನ್.ಮಲ್ಲಿಕಾರ್ಜುನಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬರೀ ವಿಜ್ಞಾನ ದಿನಾಚರಣೆ ಆಚರಿಸಿದರೆ ಅಷ್ಟೇ ಸಾಲದು, ಬಹು ಮುಖ್ಯವಾಗಿ ದೇಶದ ಜನರಲ್ಲಿ ವಿಜ್ಞಾನದ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಇಂದು ವಿಜ್ಞಾನ ಎಲ್ಲೆಡೆ ರಾರಾಜಿಸುತ್ತಿದೆ. ಒಂದು ವೇಳೆ ಮೂಲ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಿದಲ್ಲಿ ರಾಮನ್ ಅವರಂತಹ ಸಂಶೋಧನೆಗಳು ಮುನ್ನೆಲೆಗೆ ಬರುತ್ತವೆ. ಅದರಲ್ಲಿಯೂ ಭಾರತದ ಯುವಸಮೂಹ ಜಾಗತಿಕ ವಿಜ್ಞಾನದ ನೇತೃತ್ವ ವಹಿಸಬೇಕಿದೆ. ವಿಜ್ಞಾನ ದಿನ ಕೇವಲ ಫೆಬ್ರವರಿ 28 ಕ್ಕೆ ಸೀಮಿತವಾಗದೇ, ವರ್ಷವಿಡೀ ವಿವಿಧ ಚಟುವಟಿಕೆಗಳು ನಡೆಯುವ ಮೂಲಕ ವಿಜ್ಞಾನವನ್ನು ಕಲಿಯುವ, ಅದನ್ನು ಬದುಕಿನ ಭಾಗವನ್ನಾಗಿಸುವ ಪ್ರಕ್ರಿಯೆ ನಡೆದರೆ, ಭವಿಷ್ಯದಲ್ಲಿ ಭಾರತದ ವಿಜ್ಞಾನಿಗಳ ಸಂಖ್ಯೆ ಹೆಚ್ಚಾಗುತ್ತದೆ” ಎಂದು ತಿಳಿಸಿದರು.

ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಪ್ರಾಸ್ತಾವಿಕವಾಗಿ ಹಾಗೂ ಕಾಲೇಜಿನ ಪ್ರವಾಚಕ ಎ.ಹನುಮಂತರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ವೈಚಾರಿಕ ಪ್ರಜ್ಞೆ, ವೈಚಾರಿಕ ಚಿಂತನೆ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಿ.ವಿಜಯಕುಮಾರ್, ಡಿ.ನರಸಿಂಹಪ್ಪ, ರಾಜಣ್ಣ, ಎಲ್ಲಾ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಎಂ.ದೀಪ ಸ್ವಾಗತಿಸಿದರು. ಉಪನ್ಯಾಸಕಿ ಕೆ.ಬಿ.ಪುಷ್ಪಲತಾ ವಂದಿಸಿದರು. ಜೆ.ಚೇತನಾ ಕಾರ್ಯಕ್ರಮ ನಿರೂಪಿಸಿದರು.

- Advertisement -  - Advertisement - 
Share This Article
error: Content is protected !!
";