ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪಿಯು ವಿದ್ಯಾರ್ಥಿನಿ

News Desk

ಚಂದ್ರವಳ್ಳಿ ನ್ಯೂಸ್, ಬಾಗಲಕೋಟೆ:
ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪದಿಂದ ಮನನೊಂದ ವಿದ್ಯಾರ್ಥಿನಿ ಒಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ.

ತೇಜಸ್ವಿನಿ ದೊಡ್ಡಮನಿ (17) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಮುಧೋಳ ನಗರದ ಶಾರದಾ ಖಾಸಗಿ ಪಿಯು ಕಾಲೇಜಿನಲ್ಲಿ ಮೃತ ತೇಜಸ್ವಿನಿ ದೊಡ್ಡಮನಿ ಪ್ರಥಮ ಪಿಯುಸಿ ಸೈನ್ಸ್​ ಓದುತ್ತಿದ್ದಳು. ಫೆಬ್ರವರಿ 27 ರಂದು ರಸಾಯನಶಾಸ್ತ್ರ ವಿಷಯದ ವಾರ್ಷಿಕ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ತೇಜಸ್ವಿನಿ ನಕಲು‌ಮಾಡುವುದನ್ನು ಕಂಡ ಕಾಲೇಜು ಸಿಬ್ಬಂದಿ ಪ್ರಶ್ನೆ ಮಾಡಿದ್ದರು.

ತೇಜಸ್ವಿನಿ ತನ್ನ ಪೋಷಕರಿಗೆ ಈ ವಿಚಾರ ತಿಳಿಸಿದ್ದಳು. ಬಳಿಕ, ಪೋಷಕರು ಫೆಬ್ರವರಿ 28 ರಂದು ಕಾಲೇಜಿಗೆ ಬಂದು, ನಕಲು‌ಮಾಡಿದ್ದಕ್ಕೆ ಸಾಕ್ಷಿ ಕೇಳಿದ್ದರು. ಆಗ ಕಾಲೇಜು ಸಿಬ್ಬಂದಿ ಸಿಸಿ‌ಕ್ಯಾಮೆರಾ ದೃಶ್ಯ ತೋರಿಸಲು ಮುಂದಾದರು. ಅಲ್ಲದೇ, ಕಾಲೇಜು ಸಿಬ್ಬಂದಿ ಪೋಷಕರ‌ಸಮ್ಮುಖದಲ್ಲಿ ತೇಜಸ್ವಿನಿಗೆ ಬುದ್ದಿವಾದ ಹೇಳಿದ್ದಾರೆ.

ಈ ಘಟನೆಯಿಂದ ಮನನೊಂದ ವಿದ್ಯಾರ್ಥಿನಿ ತೇಜಸ್ವಿನಿ ಕಾಲೇಜಿನಿಂದ ಹೊರಗೆ ಓಡಿ ಹೋಗಿದ್ದಾಳೆ. ಎಷ್ಟೂ ಹುಡುಕಿದರೂ ತೇಜಸ್ವಿನಿ ಸಿಗಲಿಲ್ಲ. ಬಳಿಕ, ಪೋಷಕರು ಮುಧೋಳ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು. ಮಾರ್ಚ್-2ರಂದು ಭಾನುವಾರ ಮಹಾರಾಣಿ ಕೆರೆಯಲ್ಲಿ ತೇಜಸ್ವಿನಿ ಶವವಾಗಿ ಪತ್ತೆಯಾಗಿದ್ದಾಳೆ. ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 

- Advertisement -  - Advertisement - 
Share This Article
error: Content is protected !!
";