ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಒಂಟಿ ವೃದ್ಧೆಯನ್ನು ಗುರಿ ಮಾಡಿದ ಸರಗಳ್ಳರು, ಅಜ್ಜಿಯ ಕಿವಿ ಮತ್ತು ಕೊರಳಲ್ಲಿದ್ದ ಬಂಗಾರದ ಒಡವೆಗಳನ್ನು ಕಸಿದು ಪರಾರಿಯಾಗಿರುವ ಘಟನೆ ಇಂದು ಮಧ್ಯಾಹ್ನ ಸುಮಾರು 12-30 ರ ಸಮಯದಲ್ಲಿ ನಡೆದಿದೆ. ತಾಲೂಕಿನ ವಡ್ಡರಹಳ್ಳಿ ಗ್ರಾಮದ ನಿವಾಸಿ ಚಂದ್ರಮ್ಮ (75) ವಡವೆ ಕಳೆದುಕೊಂಡ ವೃದ್ಧೆಯಾಗಿದ್ದಾರೆ.
ತಾಲ್ಲೂಕಿನ ಕಂಟನಕುಂಟೆ ಗ್ರಾಮದಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರುವ ಯಲಹಂಕ-ಹಿಂದೂಪುರ ಹೆದ್ದಾರಿ ಪಕ್ಕದ ಜಮೀನಿನಲ್ಲಿ ವಡ್ಡರಹಳ್ಳಿ ಗ್ರಾಮದ ನಿವಾಸಿ ವೃದ್ದೆ ಚಂದ್ರಮ್ಮ ಅವರು ಒಂಟಿಯಾಗಿ ಹಸುಗಳನ್ನು ಮೇಯಿಸುತ್ತಿದ್ದರು.
ಇದನ್ನೇ ಬಂಡವಾಳ ಮಾಡಿಕೊಂಡು ಬೈಕ್ ನಲ್ಲಿ ಬಂದ ಮಹಿಳೆ ಹಾಗೂ ಒಬ್ಬ ಯುವಕ, ಹೆದ್ದಾರಿ ಪಕ್ಕದಲ್ಲಿ ಬೈಕ್ ನಿಲ್ಲಿಸಿ ವೃದ್ಧೆ ಬಳಿ ಬಂದು ಕೆಲಕಾಲ ಮಾತುಕತೆ ನಡೆಸಿ, ಹೊಂಗೆಕಾಯಿ ಇದಿಯಾ ಎಂದು ಆಕೆಯನ್ನು ಕೇಳಿ ಯಾಮಾರಿಸಿ, ಗಟ್ಟಿಯಾಗಿ ಹಿಡಿದುಕೊಂಡು ಮೈಮೇಲೆ ಇದ್ದ ಒಡವೆಗಳನ್ನು ಕಸಿದುಕೊಂಡು ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂದು ವೃದ್ಧೆ ಚಂದ್ರಮ್ಮ ಮಾಹಿತಿ ನೀಡಿದ್ದಾರೆ.
ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.