ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಮಾಜವು ಸೋಷಿಯಲ್ ಡಾರ್ವಿನಿಸಂ ಕಡೆಗೆ ಹೋಗಬಾರದೆಂದು ನಮ್ಮ ಹಿರಿಯರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂಲಕ ಈ ದೇಶಕ್ಕೆ ಅತ್ಯಂತ ಮಾನವೀಯವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಸಂವಿಧಾನವು ಅಸಮಾನತೆಯನ್ನು ತಗ್ಗಿಸಿ ಆದಾಯದ ನ್ಯಾಯಯುತ ಪಾಲನ್ನು ಜನರಿಗೆ ಖಾತರಿ ಪಡಿಸಬೇಕೆಂದು ಹೇಳುತ್ತದೆ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಈ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ವರ್ಷಕ್ಕೆ 52 ಸಾವಿರ ಕೋಟಿಗಳಿಗೂ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 5 ಗ್ಯಾರಂಟಿ ಯೋಜನೆಗಳಿಗಾಗಿ 70000 ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಖಾತೆಗಳಿಗೆ ವರ್ಗಾಯಿಸಿದೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು:
ಶಿಕ್ಷಣ ಕ್ಷೇತ್ರಕ್ಕಾಗಿ ಅಪಾರ ಪ್ರಮಾಣದ ಸಂಪನ್ಮೂಲವನ್ನು ವಿನಿಯೋಗಿಸಲಾಗುತ್ತಿದೆ. ಶಿಕ್ಷಣ ಇಲಾಖೆಯಲ್ಲಿ 13000 ಕ್ಕೂ ಹೆಚ್ಚಿನ ಪದವೀಧರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 1088 ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಲಾಗಿದೆ. 8,311 ಸಂಖ್ಯೆಯ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ವಿವೇಕ ಯೋಜನೆ ಹಾಗೂ ವಿಶೇಷ ಅನುದಾನದಡಿ 5349 ಶಾಲಾ ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿವೆ. ಪ್ರಸ್ತುತ 784 ಕೊಠಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. 522 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ. ರಾಜ್ಯದ 1953 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿ ನರ್ಸರಿ ಶಾಲೆಗಳನ್ನು ತೆರೆಯಲಾಗಿದೆ. ಇದಷ್ಟೇ ಅಲ್ಲದೆ, ಮಕ್ಕಳಿಗೆ ರಜಾ ದಿನಗಳನ್ನು ಹೊರತುಪಡಿಸಿ ವಾರದ ಎಲ್ಲಾ ದಿನಗಳಂದು ಸರ್ಕಾರ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್‍ಗಳು ಸೇರಿ ಮೊಟ್ಟೆಯನ್ನು ನೀಡುತ್ತಿವೆ.
ನಿರುದ್ಯೋಗ ಸಮಸ್ಯೆ ನಿವಾರಿಸಲು ಕ್ರಮ :
ಸರ್ಕಾರವು ಇತ್ತೀಚೆಗೆ ತಾನೆ ಜಾಗತಿಕ ಹೂಡಿಕೆದಾರರ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದೆ. ವಿಶ್ವದ 19 ಪ್ರಮುಖ ದೇಶಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವು. ಈ ಸಮ್ಮೇಳನವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೂಡಿಕೆಯಲ್ಲಿ ಹೊಸ ದಾಖಲೆಯನ್ನೆ ಬರೆದಿದೆ. 10.27 ಲಕ್ಷ ಕೋಟಿ ರೂ.ಗಳಷ್ಟು ಮೊತ್ತವನ್ನು ಹೂಡಿಕೆ ಮಾಡಲು ಒಡಂಬಡಿಕೆಗಳಾಗಿವೆ. ಈ ಬಾರಿ ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರು ವ್ಯಾಪ್ತಿಯಿಂದ ಹೊರಗೆ ಶೇ.75 ಕ್ಕೂ ಹೆಚ್ಚಿನ ಪ್ರಮಾಣದ ಹೂಡಿಕೆ ಒಪ್ಪಂದಗಳಾಗಿವೆ. ಉತ್ತರ ಕರ್ನಾಟಕದಲ್ಲಿ ಶೇ.45ರಷ್ಟು ಹೂಡಿಕೆ ಮಾಡಲು ಉದ್ದಿಮೆದಾರರು ಮುಂದೆ ಬಂದಿದ್ದಾರೆ. ಇದರಿಂದ ರಾಜ್ಯದ ನಿರುದ್ಯೋಗ ಸಮಸ್ಯೆಯನ್ನು ನಿಯಂತ್ರಿಸಲು ನೆರವಾಗುತ್ತದೆ.
ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲೂ ಕರ್ನಾಟಕವು ಇಡೀ ದೇಶದಲ್ಲಿ ಮುಂಚೂಣಿ ರಾಜ್ಯವಾಗಿದೆ. ರಾಜ್ಯವು ತನ್ನ 2024-25 ರ ಬಜೆಟ್‍ನ ಶೇ.15.01ರಷ್ಟು ಸಂಪತ್ತನ್ನು ಬಂಡವಾಳ ವೆಚ್ಚಗಳಿಗಾಗಿ ವಿನಿಯೋಗಿಸುತ್ತಿದೆ. ಇದು ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣ ಮುಂತಾದ ಪ್ರಗತಿಪರ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದ್ದಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸಲು ಸಮಗ್ರ ಹಾಗೂ ಸಮರ್ಥ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದರ ಜೊತೆಯಲ್ಲಿ ಜನರಿಗೆ ಆರೋಗ್ಯ, ಶಿಕ್ಷಣ, ನೈರ್ಮಲ್ಯ ಹಾಗೂ ಸುಸ್ಥಿರ ಕೃಷಿ ವ್ಯವಸ್ಥೆಯುಳ್ಳ ರಾಜ್ಯವನ್ನಾಗಿ ರೂಪಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ.
ಕಿರು ಸಾಲ ವಸೂಲಾತಿಯ ಕಿರುಕುಳವನ್ನು ತಡೆಯುವ ನಿಟ್ಟಿನಲ್ಲಿ ಶಾಸನಾತ್ಮಕ ಕ್ರಮ :
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಮಾಜದ ಆರ್ಥಿಕ ದುರ್ಬಲ ವರ್ಗದ ಜನತೆಯಿಂದ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡದ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಕರ್ನಾಟಕ ರಾಜ್ಯದಲ್ಲಿ ಕಿರು ಸಾಲ ಮತ್ತು ಸಣ್ಣ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಗಂಭೀರ ಕ್ರಮಗಳನ್ನು ಕೈಗೊಳ್ಳಲು, ಕಿರುಕುಳ ನೀಡುವ ವ್ಯಕ್ತಿಗಳಿಗೆ ಕನಿಷ್ಠ 6 ತಿಂಗಳು ಮತ್ತು 10 ವರ್ಷಗಳ ವರೆಗೆ ವಿಸ್ತರಿಸಬಹುದಾದ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ವರೆಗೆ ದಂಡವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಕಿರು ಸಾಲ ವಸೂಲಾತಿಯ ಕಿರುಕುಳವನ್ನು ತಡೆಯುವ ನಿಟ್ಟಿನಲ್ಲಿ ಶಾಸನಾತ್ಮಕವಾದ ಕ್ರಮಗಳಿಗೆ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.