ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶ್ವ ವಿದ್ಯಾಲಯಗಳಿಗಾಗಿ ಎಷ್ಟು ಹಣ ಕೊಟ್ಟಿದ್ದಾರೆ. ವಿವಿಗೆ ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ಅನುದಾನ ಕೊಡಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಬೆಂಗಳೂರು ವಿವಿ ಆವರಣದಲ್ಲಿ ಮಾತನಾಡಿದ ಅವರು, ನೂತನ ವಿಶ್ವವಿದ್ಯಾಲಯಕ್ಕಾಗಿ ಹೋರಾಟ ಮಾಡುತ್ತಿರುವವರು ನೈಜವಾಗಿ ಮಾತನಾಡಬೇಕು ಎಂದು ಅವರು ತಾಕೀತು ಮಾಡಿದರು.
ಯಾವುದೇ ವಿವಿ ಮುಚ್ಚುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಈ ವಿವಿಗಳಿಗಾಗಿ ಬಿಜೆಪಿ ಸರ್ಕಾರ ಕೇವಲ 2 ಕೋಟಿ ರೂ. ಹಣವಿಟ್ಟಿತ್ತು. 2 ಕೋಟಿ ಹಣದಲ್ಲಿ ವಿವಿ ಸ್ಥಾಪನೆ ಮಾಡಲು ಆಗುವುದಿಲ್ಲ. ಇದಕ್ಕೆ ನೂರಾರು ಎಕರೆ ಜಾಗ ಬೇಕು. ಬೆಂಗಳೂರು ವಿವಿ ಮಾಡುವಾಗ ಹೇಗೆ 1,200 ಎಕರೆ ಜಮೀನು ಇಟ್ಟು ಸ್ಥಾಪಿಸಿದ್ದರೋ, ಅದೇ ರೀತಿ ಇದರಲ್ಲಿ ಅರ್ಧದಷ್ಟು ಜಾಗವನ್ನಾದರೂ ಮೀಸಲಿಡಬೇಕು ಎಂದು ಡಿಕೆ ಶಿವಕುಮಾರ್ ತಾಕೀತು ಮಾಡಿದರು.
ಕೇವಲ ಹೆಸರಿಗಾಗಲಿ, 20-30 ಕಾಲೇಜುಗಳಿಗಾಗಲಿ, ವಿಸಿ ಹುದ್ದೆಗಾಗಿ ವಿವಿ ಮಾಡಲು ಆಗುವುದಿಲ್ಲ. ಈ ಹಿಂದೆ ಈ ಪ್ರಯತ್ನ ಮಾಡಲಾಗಿತ್ತು ಎಂದು ಅವರು ದೂರಿದರು.
ಮೈಸೂರು ವಿವಿಯ ಹೆಸರಿನಲ್ಲೇ ಮಂಡ್ಯ, ಕೊಡಗು ಭಾಗದ ಅನೇಕ ವಿದ್ಯಾರ್ಥಿಗಳು ಓದಬೇಕು, ಡಾ.ರಾಧಾಕೃಷ್ಣ, ಕುವೆಂಪು ಅವರಿದ್ದ ಮೈಸೂರು ವಿವಿಯಲ್ಲಿ ಓದಿದರೆ ನಮಗೂ ಬಹಳ ಗೌರವವಿರುತ್ತದೆ ಎಂದು ಮನವಿ ಮಾಡಿದ್ದಾರೆ. ಸಿಬ್ಬಂದಿ ತಮ್ಮ ಹಿರಿತನ ವ್ಯರ್ಥವಾಗುತ್ತದೆ ಎಂದು ನೂತನ ವಿವಿಗೆ ಆಗಮಿಸಲು ಮುಂದಾಗುತ್ತಿಲ್ಲ ಎಂದು ಶಿವಕುಮಾರ್ ದೂರಿದರು.
ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ವರದಿ ನೀಡಿತ್ತು. ಇದಕ್ಕಾಗಿ ಸಚಿವ ಸಂಪುಟ ಉಪ ಸಮಿತಿ ಮಾಡಲಾಗಿತ್ತು. ಈ ಸಮಿತಿಯಲ್ಲಿ ನಾನು ಇದ್ದು ಚರ್ಚೆ ಮಾಡಿದ್ದೇನೆ. ಕೆಲವರು ರಾಜಕೀಯವಾಗಿ ಹೋರಾಟ ಮಾಡಬಹುದು. ನಮಗೆ ಮಕ್ಕಳ ವಿದ್ಯಾಭ್ಯಾಸ ಮುಖ್ಯ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ವಿಚಾರವಾಗಿ ಇನ್ನು ಯಾವುದೇ ಅಂತಿಮ ತೀರ್ಮಾನ ಮಾಡಿಲ್ಲ ಎಂದು ಅವರು ತಿಳಿಸಿದರು.
ಪ್ರತಿಭಟನೆ ಮಾಡುವವರು ಮಾಡುತ್ತಿರುತ್ತಾರೆ. ವಿವಿ ಮಾಡಿದ್ದೇವೆ ಎಂದು ಹೇಳುತ್ತಿರುವವರು ಆ ವಿವಿಗೆ ಎಷ್ಟು ಹಣ ನೀಡಿದ್ದರು ಎಂದು ಹೇಳಬೇಕಲ್ಲವೇ? ಎಂದು ಪ್ರಶ್ನಿಸಿದ ಅವರು ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ಅನುದಾನ ತಂದು ಕೊಟ್ಟರೆ ಅಗತ್ಯವಿರುವ ಜಾಗ ಖರೀದಿ ಮಾಡಿ ವಿವಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಡಿಕೆ ಶಿವಕುಮಾರ್ ಮಾರ್ಮಿಕವಾಗಿ ತಿಳಿಸಿದರು.
ಯಕ್ಷಗಾನ ಸರಳೀಕರಣ: ಯಕ್ಷಗಾನ ನಮ್ಮ ಸಂಸ್ಕೃತಿ. ಇದಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಯಾವುದೇ ಸಮಸ್ಯೆ ಇಲ್ಲದೆ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ವಿಧಾನಸಭೆಯ ಗಮನ ಸೆಳೆವ ಚರ್ಚೆ ವೇಳೆ ಭರವಸೆ ನೀಡಿದರು.
ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಅವರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿರುವ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಗೃಹ ಸಚಿವರ ಗಮನ ಸೆಳೆದರು. ಗೃಹ ಸಚಿವರ ಪರವಾಗಿ ಡಿಸಿಎಂ ಉತ್ತರ ನೀಡಿದರು.
ಯಕ್ಷಗಾನ ಪ್ರದರ್ಶನಕ್ಕೆ ಪೂರ್ವಾನುಮತಿ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಸುನೀಲ್ ಕುಮಾರ್ ಅವರು ಪ್ರಸ್ತಾಪಿಸಿದ್ದಾರೆ. ಯಕ್ಷಗಾನ ಮಾಡುವಾಗ ಯಾರೂ ಇಂದು ಅರ್ಜಿ ಹಾಕಿ ನಾಳೆ ಯಕ್ಷಗಾನ ಪ್ರದರ್ಶನ ಮಾಡುವುದಿಲ್ಲ. ಅದಕ್ಕೆ 15 ದಿನಗಳ ತಯಾರಿ ಇರುತ್ತದೆ. ಬಿಜೆಪಿ ಕಾಲದಲ್ಲೂ ಕೆಲವು ನಿಯಮಾವಳಿಗಳನ್ನು ರೂಪಿಸಲಾಗಿದೆ. ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಪಡೆಯಲು ಕಾಲಾವಕಾಶ ನೀಡಬೇಕು. ಯಕ್ಷಗಾನ ಬೆಳಗಿನಜಾವದವರೆಗೂ ನಡೆಯುವುದರಿಂದ ಮಧ್ಯರಾತ್ರಿಯೇ ನಿಲ್ಲಿಸಬೇಕು ಎಂದು ಯಾರೂ ಆಕ್ಷೇಪ ಮಾಡುವುದಿಲ್ಲ. ಈಗ ಆಗಿರುವ ಪ್ರಕರಣವನ್ನು ಪರಿಶೀಲನೆ ಮಾಡುತ್ತೇವೆ. ಯಕ್ಷಗಾನ, ಬಯಲಾಟ ದೇಶದ ಆಸ್ತಿ. ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂಬುದು ನಮ್ಮ ಉದ್ದೇಶವಿದೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ನಿಲ್ಲಿಸಲು ಆಗುವುದಿಲ್ಲ ಎಂದು ಭರವಸೆಯಿತ್ತರು.