ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೆಣ್ಣಿನ ಶೋಷಣೆ
ಎಲ್ಲೆಲ್ಲೂ ಹೀನೈಸುವರು
ಇವರ್ಯಾರು ಅವರ್ಯಾರೆಂಬ
ಎಪ್ಪತ್ತಾರು ವರ್ಷಗಳ ಸ್ವಾತಂತ್ರ್ಯದಲಿ
ಮಹಿಳೆಗೆ ಭದ್ರತೆ ಸಿಕ್ಕಿತೆಲ್ಲಿ?
ದೇಶದೆಲ್ಲೆಡೆಯ
ಬಣ್ಣದ ಚಿತ್ತಾರಗಳೆಲ್ಲೆಲ್ಲೂ
ಹೊಗಳಿಕೆಯು ನೆಪಮಾತ್ರಮಾಗಿ
ತೆಗಳಿಕೆಯ ಮಾನಹರಣವೇ ಅಧಿಕವಿಹುದು
ಎಲ್ಲ ಕಡೆಯಲ್ಲೂ
ನರಳಿ ಮಾಯವಾಗುತಿಹಳು
ಸಾಮಾಜಿಕ, ಸಂಸಾರ
ಸಂಕೋಲೆಗಳಲ್ಲಿ
ಖಾಕಿ, ಖಾದಿ, ಕಾವಿಗಳು
ಹೇಳದೆ ಮಾಯವಾಗುತಿರುವಾಗ
ಯಾರ ನಂಬಲಿ
ನ್ಯಾಯಕ್ಕಿಂದು?
ಹೆಣ್ಣ ಮೇಲಿನ
ದೌರ್ಜನ್ಯದ ಕತ್ತಲಲಿ
ಎಲ್ಲಿ ಹೋಯ್ತು
ಮಹಾಶಯನ ರಾಮರಾಜ್ಯದ ಕನಸು?
ರಕ್ತ ಮಾಂಸಗಳ ಮೂಟೆ
ಹೊತ್ತ ದೇಹವು
ಯಂತ್ರದಂತೆಯೇ ಇರಬೇಕು
ಸದಾ ಅವಳು
ಹಗಲಲ್ಲೂ ಕಾಣುತಿಹಳು ಕತ್ತಲನೆ
ಕಾಮುಕರ ಕಣ್ಣು ತಪ್ಪಿಸಿ ಓಡಾಡುತಿಹಳು
ದಾರಿದ್ರ್ಯ ಸಂತತಿಯ
ಕಾಮ ಪಿಶಾಚಿಗಳ ಅಟ್ಟಹಾಸದಿ
ಕೊಲ್ಲುತಿಹರು ಹೆಣ್ಣು ಹುಣ್ಣೆಂದು
ಗರ್ಭಿಣಿಯ ಹೊಟ್ಟೆ ಸೀಳಿ ಕತ್ತು ಕೋಯ್ದು ಕೊಲ್ಲುವಾಗ
ಭ್ರೂಣದ ನೋವ ಸಹಿಸದಾದಳು
ಹಸಿದವಳು, ಕದ್ದ ತುಂಡು ರೊಟ್ಟಿಗಾಗಿ
ಬೆತ್ತಲೆ ಮೆರವಣಿಗೆ ಮಾಡಿಸುವರು
ಎದುರಿಸಿ ಮಾತಾಡಿದ ಹೆಣ್ಣನ್ನು
ಹತ್ಯೆಗೈವರು ಹಣ ಬಲದಿಂದ
ಪ್ರೀತಿ ದಿಕ್ಕರಿಸಿದಳೆಂದು
ಉರಿವ ಆಸಿಡ್ಸುರಿದು
ರೂಪವ ಅಂದಗೆಡಿಸಿ
ಬದುಕಿಗೆದುರು ನಿಲ್ಲಿಸಿ ಕುರೂಪಿಯಾಗಿಸುವರು
ಹೆಣ್ಣಿನ ಯಾತನೆಯ ಬಣ್ಣಿಸದೆ
ಪ್ರತಿ ಸೂರ್ಯಾಸ್ತದಲ್ಲಿ
ಮತ್ತೊಂದರ ಸೂರ್ಯೋದಯದ
ಖಾತ್ರಿಯಿಲ್ಲವಳಿಗೆ
ಬದಲಾದ ಪರಿಸ್ಥಿತಿಯಲ್ಲಿ
ಹೋರಾಟದ ಸ್ಥಿತಿಗತಿ ಬಂದಿತೆಲ್ಲಿ
ಹೆಣ್ಣಿನ ಶೋಷಣೆಯು
ಇಂದು – ಅಂದೂ ಒಂದೇ
ಕುರುಡಾದ ಜನರ ಅಂತರಂಗದಲ್ಲಿ
ಕೇಳಲಾಗದ ಹೆಣ್ಣಿನ ಆಕ್ರಂದನ
ಹೇಳಿ ಕೇಳಿದರಷ್ಟೇ ಕಥೆಯಲ್ಲಿ
ಭಾರತಾಂಬೆಯ ಪಾದ ಪ್ರೇಮದಲಿ
ನಲುಗಿದ ಹೆಣ್ಣಿನ ರಕ್ಷಣೆಯೆಲ್ಲಿ?
ಈ ಎಪ್ಪಾತ್ತರು ವರ್ಷಗಳ ಸ್ವಾತಂತ್ರ್ಯದಲಿ
ಕವಿತೆ-ಡಾ.ಮಮತ (ಕಾವ್ಯಬುದ್ಧ),
ಅಧ್ಯಾಪಕಿ, ಸಾಹಿತಿ, ಸಂಶೋಧಕಿ,ಸಂಪನ್ಮೂಲ ವ್ಯಕ್ತಿ
ಒನ್ ವಲ್ಡ್ ಇಂಟರ್ನ್ಯಾಷನಲ್ ಸ್ಕೂಲ್, ಸರ್ಜಾಪುರ.

