ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2025-26 ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಖಾಸಗಿ ಚಾಲಕರು, ಮಾಲೀಕ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ವಲಯವನ್ನು ನಿರ್ಲಕ್ಷಿಸಲಾಗಿದೆ ಎಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಆರೋಪಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಚಾಲಕರ ಸಮಸ್ಯೆಗಳನ್ನು ಸರ್ಕಾರ ಕಡೆಗಣಿಸಿದೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ನೀಡಿದ ಯಾವುದೇ ಮನವಿಗಳನ್ನು ಪರಿಗಣಿಸದೇ ಚಾಲಕ ಸಮುದಾಯವನ್ನು ಕಡೆಗಣಿಸಿದೆ ಎಂದು ಹೇಳಿದ್ದಾರೆ.
ರಾಜ್ಯದ ಬೊಕ್ಕಸ ತುಂಬಿಸಲು ಚಾಲಕ ಸಮುದಾಯ ಪ್ರತಿ ಮೂರು ತಿಂಗಳಿಗೊಮ್ಮೆ ಹಳದಿ ಬೋರ್ಡ್, ಟ್ಯಾಕ್ಸಿ, ಲಾರಿ, ಬಸ್ಸು, ಶಾಲಾ ವಾಹನಗಳು ಒಳಗೊಂಡಂತೆ ಬಹುತೇಕ ವಲಯದ ವಾಹನಗಳು ನಿರಂತರವಾಗಿ ತೆರಿಗೆ ಪಾವತಿಸುತ್ತಿವೆ. ಆದರೆ ನಮ್ಮ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸದೇ ಇರುವುದು ಅತೀವ ನೋವುಂಟು ಮಾಡಿದೆ. ಸರ್ಕಾರದ ಧೋರಣೆ ಪ್ರತಿಭಟಿಸಿ ತೆರಿಗೆ ಪಾವತಿ ಸ್ಥಗಿತ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಪಘಾತ ತಪ್ಪಿಸಲು ಹೆದ್ದಾರಿಗಳಲ್ಲಿ ಪ್ರತಿ 100 ಕಿಲೋಮೀಟರ್ ಗೆ ವಿಶ್ರಾಂತಿ ಗೃಹ ನಿರ್ಮಾಣ, ಆಂಬುಲೆನ್ಸ್ ಸೌಲಭ್ಯ, ಲಾರಿ ಚಾಲಕರು ರಾಷ್ಟ್ರೀಯ ಹೆದ್ದಾರಿ ಸಮೀಪ ವಿಶ್ರಾಂತಿ ಪಡೆಯುವ ಸಮಯದಲ್ಲಿ ಲಾರಿಗಳಲ್ಲಿ ಡಿಸೇಲ್ ಕಳ್ಳತನ ಮತ್ತು ಚಾಲಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ದರೋಡೆ ಮಾಡುತ್ತಿದ್ದು, ಪೊಲೀಸ್ ಗಸ್ತು ಹೆಚ್ಚಿಸುವಂತೆ ಕೋರಲಾಗಿದೆ.
ಜೊತೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಹನ ಚಾಲಕರಿಗಾಗಿ ಮತ್ತೆ ಎರಡು ಇಂದಿರಾ ಕ್ಯಾಂಟೀನ್ ಸ್ಥಾಪಿಸಬೇಕು ಎಂಬ ಮನವಿಯನ್ನು ಸಹ ಪರಿಗಣಿಸಿಲ್ಲ. ಪ್ರತಿವರ್ಷ ಚಾಲಕರ ದಿನ ಆಚರಿಸಿ ಉತ್ತಮ ಚಾಲಕರನ್ನು ಪ್ರೋತ್ಸಾಹಿಸಬೇಕು. ಅಪಘಾತ ತಪ್ಪಿಸಲು ಚಾಲಕರ ತರಬೇತಿ ಕೇಂದ್ರ ಸ್ಥಾಪಿಸಬೇಕು. ರಾಜ್ಯದಲ್ಲಿ ಬಾಡಿಗೆ ದರವನ್ನು “ಒನ್ ಸಿಟಿ ಒನ್ ರೇಟ್” ಎಂಬ ನಿಯಮ ನಿಗದಿಪಡಿಸುವಂತೆ ಕೋರಲಾಗಿತ್ತು. ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಬಜೆಟ್ ನಲ್ಲಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

