ಚಂದ್ರವಳ್ಳಿ ನ್ಯೂಸ್, ಹರಿಯಬ್ಬೆ:
ಮಕ್ಕಳ ಕೈಗೆ ಹಣ ಕೊಡಬೇಡಿ, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಜಂಕ್ ಫುಡ್ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾ ಬೀರಲಿದೆ ಎಂದು ಬೆಂಗಳೂರು ರಾಮಯ್ಯ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಸುಮಾ ಎ.ಆರ್ ಎಚ್ಚರಿಸಿದರು.
ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹರಿಯಬ್ಬೆ ಗೆಳೆಯರ ಬಳಗದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕುರಿತ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. ಜಂಕ್ ಫುಡ್ ಅಥವಾ ಸಂಸ್ಕರಿಸಿದ ಯಾವುದೇ ಆಹಾರ ಪದಾರ್ಥಗಳು ಬಾಯಿಗೆ ಹೆಚ್ಚು ರುಚಿ ಕೊಡುತ್ತವೆ. ಜನರಿಗೆ ಇಂತಹ ಆಹಾರಗಳು ಎಂದರೆ ಪಂಚಪ್ರಾಣ. ಕೆಲವು ಸಂಸ್ಕರಿಸಿದ ಆಹಾರ ಪದಾರ್ಥಗಳು ಕೆಡಬಾರದು ಮತ್ತು ದೀರ್ಘ ಕಾಲ ಬಾಳಿಕೆ ಬರಬೇಕು ಎಂಬ ಕಾರಣಕ್ಕೆ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು, ಕೆಫೀನ್ ಅಂಶ, ಕೊಬ್ಬಿನ ಅಂಶ ಮತ್ತು ಸಕ್ಕರೆ ಅಂಶವನ್ನು ಬಳಕೆ ಮಾಡಿರುತ್ತಾರೆ. ಇಂತಹ ಜಂಕ್ ಫುಡ್ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಜಂಕ್ ಫುಡ್ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದರು.
ಜಂಕ್ ಫುಡ್ ತಿನ್ನುವುದರಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಪಾರ್ಶ್ವವಾಯು, ಮಾನಸಿಕ ಆರೋಗ್ಯ ಸಮಸ್ಯೆ, ಹಲ್ಲಿನ ಸಮಸ್ಯೆ, ಜೀರ್ಣಕಾರಿ ಸಮಸ್ಯೆಗಳು, ರೋಗ ನಿರೋಧಕ ಶಕ್ತಿ ದುರ್ಬಲ, ಹಾರ್ಮೋನುಗಳ ಅಸಮತೋಲನ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಲಿದೆ ಎಂದು ಎಚ್ಚರಿಸಿದರು.
ಚಿಪ್ಸ್, ಕುರ್ ಕುರೆ, ಬಿಸ್ಕೆಟ್ ಇತರೆ ಸಂಸ್ಕರಿಸಿದ ಆಹಾರಗಳ ಸೇವನೆಯಿಂದ ಮಕ್ಕಳ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಜಂಕ್ ಫುಡ್‌ನಲ್ಲಿ ವಿಟಮಿನ್‌ಗಳು, ಖನಿಜಗಳು, ಫೈಬರ್‌ಗಳು ಅಥವಾ ನೈಸರ್ಗಿಕ ಪದಾರ್ಥಗಳ ಕೊರತೆಯಿದೆ ಇರುತ್ತದೆ. ಸಾದಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಸಕ್ಕರೆ, ಉಪ್ಪು ಸೇರಿದಂತೆ ಕೆಮಿಕಲ್ ಬಳಸಲಾಗುತ್ತದೆ. ಇಂತಹ ಸಂಸ್ಕರಿಸಿದ ಪದಾರ್ಥಗಳು ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯಿರುವ ಆಹಾರಗಳನ್ನು ಜಂಕ್ ಫುಡ್ ಎಂದು ಕರೆಯಲಾಗುತ್ತದೆ. ಈ ಆಹಾರಗಳು ಜೀವ ಸತ್ವಗಳು ಮತ್ತು ಪ್ರೋಟೀನ್‌ಗಳನ್ನು ಹೊಂದಿರುವುದಿಲ್ಲ ಮತ್ತು ಹೆಚ್ಚಿನ ಪ್ರಮಾಣದ ಕೊಬ್ಬಿನಂಶ ಹೊಂದಿರುತ್ತವೆ ಎಂದು ಡಾ.ಸುಮಾ ಎಚ್ಚರಿಸಿದರು.
ಜಂಕ್ ಫುಡ್‌ನಲ್ಲಿ ಹೆಚ್ಚಿನ ಕ್ಯಾಲೋರಿ, ಕೊಬ್ಬು ಮತ್ತು ಸಕ್ಕರೆ ಅಂಶವು ತೂಕ ಹೆಚ್ಚಾಗಲು ಕಾರಣವಾಗುತ್ತದೆ, ಹೃದಯವನ್ನು ಆಯಾಸಗೊಳಿಸುತ್ತದೆ ಮತ್ತು ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಜಂಕ್ ಫುಡ್‌ನಲ್ಲಿರುವ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸಕ್ಕರೆಯು ಹೆಚ್ಚಿನ ಕೊಲೆಸ್ಟ್ರಾಲ್‌ಗೆ ಕೊಡುಗೆ ನೀಡುತ್ತದೆ. ಹೆಚ್ಚಿನ ಜಂಕ್ ಫುಡ್ ಸೇವನೆಯು ಖಿನ್ನತೆ, ಆತಂಕ ಮತ್ತು ಪೌಷ್ಟಿಕಾಂಶಗಳ ಕೊರತೆ, ಮೆಮೊರಿ ದುರ್ಬಲತೆಗೆ, ಕೊಬ್ಬಿನ ಜಂಕ್ ಆಹಾರವು ಜೀರ್ಣ ಕ್ರಿಯೆ ಸಮಸ್ಯೆ, ಮಲಬದ್ಧತೆ, ಉಬ್ಬುವುದು ಮತ್ತು ಅಜೀರ್ಣ, ಹಲ್ಲಿನ ಕೊಳೆತ, ವಸಡು ಸಮಸ್ಯೆಗಳು, ದುರ್ವಾಸನೆ ಮತ್ತು ಕುಳಿಗಳಿಗೆ ಕಾರಣವಾಗಲಿದೆ ಎಂದು ಅವರು ಎಚ್ಚರಿಸಿದರು.

ಮಕ್ಕಳ ಕೈಗೆ ಯಾವುದೇ ಕಾರಣಕ್ಕೂ ಮೊಬೈಲ್, ಸ್ಮಾರ್ಟ್ ಫೋನ್ ಗಳನ್ನು ನೀಡಬೇಡಿ. ಅತಿಯಾದ ಮೊಬೈಲ್ ಬಳಕೆ ಸೋಷಿಯಲ್ ಮೀಡಿಯಾದ ಪ್ರಭಾವ ಹೆಚ್ಚಾಗುತ್ತದೆ. ಮಕ್ಕಳು ದೊಡ್ಡವರಾಗುತ್ತಾ ಅವರಿಗೆ ಬಾಹ್ಯ ಪ್ರಪಂಚ ಸೋಷಿಯಲ್ ಮೀಡಿಯಾದ ಮೂಲಕ ಪ್ರಭಾವ ಬೀರಿ ಹದಿಹರೆಯದಲ್ಲಿ ತಮ್ಮ ಮೇಲೆ ನಂಬಿಕೆ ಕಡಿಮೆಯಾಗುತ್ತಾ ಹೋಗುತ್ತಾರೆ. ಇನ್ಸ್ಟಾಗ್ರಾಂ ಫಾಲೋವರ್ಸ್, ರೀಲ್ಸ್ ಗಳು, ಸೋಷಿಯಲ್ ಮೀಡಿಯಾ ಸ್ಟೇಟಸ್, ಅಲ್ಲಿ ಬರುವ ಸಂಗತಿಗಳಿಗೆ ಹೆಚ್ಚು ಒತ್ತು ಕೊಡುತ್ತಾ, ತಲೆಕೆಡಿಸಿಕೊಳ್ಳುವುದರಿಂದ ಸಣ್ಣಪುಟ್ಟ ಸಂಗತಿಗಳಿಗೂ ಹದಿಹರೆಯದಲ್ಲಿ ತಲೆಕೆಡಿಸಿಕೊಳ್ಳುತ್ತಾರೆ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ವೈದ್ಯರು ಜಾಗೃತಿ ಮೂಡಿಸಿದರು.
5 ವರ್ಷ ಪುಟ್ಟ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಲು ಹೋಗಲೇಬೇಡಿ, ಮಗು ಹಠ ಮಾಡುತ್ತದೆ, ಸರಿಯಾಗಿ ಊಟ-ತಿಂಡಿ ಮಾಡುವುದಿಲ್ಲ ಎಂದು ಸ್ಮಾರ್ಟ್ ಫೋನ್ ತೋರಿಸಿ ತಿನ್ನಿಸುವ ಅಭ್ಯಾಸ ಮಾಡಲೇಬೇಡಿ. ಬೇರೆ ರೀತಿಯಲ್ಲಿ ಮಗುವನ್ನು ತಾಳ್ಮೆಯಿಂದ ನಿಭಾಯಿಸಿ ಅವರಿಗೆ ಊಟ-ತಿಂಡಿ ತಿನ್ನಿಸಿ ಎಂದು ಡಾ.ಸುಮಾ ಸಲಹೆ ನೀಡಿದರು.
ಅಬ್ಬಿನಹೊಳೆ ಪೊಲೀಸ್ ಠಾಣೆಯ ಎಎಸ್ಐ ರೇಖಾ ಮಾತನಾಡಿ ಮಹಿಳೆಯರು ಶೋಷಣೆಗೆ ಒಳಗಾಗಿದ್ದರಿಂದ ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ಮಹಿಳೆಯರನ್ನು ನೋಡುವ ರೀತಿ ಬದಲಾಗಬೇಕು. ಇಂದು ಹೆಣ್ಣು ಇಡೀ ಜಗತ್ತನ್ನೇ ತೂಗಿಸುವ ಶಕ್ತಿ ಹೊಂದಿದ್ದಾಳೆ. ಇಂದು ಎಲ್ಲ ರಂಗದಲ್ಲೂ ಮಹಿಳೆ ತನ್ನ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದಾಳೆ ಎಂದು ಅವರು ಹೇಳಿದರು.
ಅದೇ ರೀತಿ ಮಹಿಳೆಯರು ಬಂಗಾರದ ಒಡವೆಗಳನ್ನು ತೋರ್ಪಡಿಸಲು ಹಾಕಿಕೊಳ್ಳಬೇಡಿ, ಇದರಿಂದ ಸಾಕಷ್ಟು ಸರಗಳ್ಳತನ ಸೇರಿದಂತೆ ಇತರೆ ಕೃತ್ಯಗಳು ಸಂಭವಿಸುತ್ತಿವೆ ಎಂದು ಎಚ್ಚರಿಸಿದರು.
ಧರ್ಮಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿತಾ ಮಾತನಾಡಿ, ಇಂದು ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ದೊಡ್ಡ ಮಟ್ಟದ ಸಾಧನೆ ಮಾಡುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ನಿರ್ವಹಿಸುವುದಲ್ಲದೆ ಹೊರ ಪ್ರಪಂಚದ ಎಲ್ಲ ಕೆಲಸ ಕಾರ್ಯಗಳಲ್ಲೂ ಮಹಿಳೆ ದಿಟ್ಟ ಹೆಜ್ಜೆ ಇಟ್ಟು ಸಾಧನೆಯತ್ತ ದಾಪುಗಾಲು ಹಾಕಿದ್ದಾಳೆಂದು ವೈದ್ಯರು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕೃತ ಹರಿಯಬ್ಬೆ ಸಿ.ಹೆಜಾರಪ್ಪ ಮಾತನಾಡಿ, ಹರಿಯಬ್ಬೆ ಗ್ರಾಮದ ಯುವಕರು, ಶಿಕ್ಷಣವಂತರು ಹರಿಯಬ್ಬೆ ಗೆಳೆಯರ ಬಳಗ ಕಟ್ಟಿಕೊಂಡು ಸಾಮಾಜಿಕ ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಇಂದು ಇಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭವಾಗಲು ಬಜ್ಜೇರ ಮಾರುತಿ ಪ್ರಸನ್ನ ಕಾರಣರಾಗಿದ್ದಾರೆ. ಅದೇ ರೀತಿ ಇಂದು ಇಲ್ಲಿ ಮಕ್ಕಳ ತಜ್ಞ ವೈದ್ಯರನ್ನು ಆಹ್ವಾನಿಸಿ ಮಕ್ಕಳು ಮತ್ತು ಪೋಷಕರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವ ಕೆ.ಪಿ ಸತ್ಯನಾರಾಯಣ ಸೇರಿದಂತೆ ಇತರೆ ಎಲ್ಲ ಸ್ನೇಹ ಬಳಗ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಮಕ್ಕಳನ್ನು ದೊಡ್ಡ ಮಟ್ಟದ ಚಿಂತನೆಗೆ ಒಳಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಎಲ್ ಕೆಜಿ ಯುಕೆಜಿ ವಿಭಾಗದ ಅಧ್ಯಕ್ಷೆ ಶಾರದಮ್ಮ ವೆಂಕಟೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಜ್ಞಾನ ದಿನಾಚರಣೆಯಲ್ಲಿ ಬಹುಮಾನಿತರಾದ 6 ಮಕ್ಕಳನ್ನ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಎಲ್ ಕೆಜಿ-ಯುಕೆಜಿ ಉಪಾಧ್ಯಕ್ಷೆ ಸ್ವರೂಪ, ಬೆಂಗಳೂರು ವಿಜಯಲಕ್ಷ್ಮಿ, ಮಹಿಳಾ ಪೊಲೀಸ್ ಗಗನ, ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ, ಎಸ್ ಡಿಎಂಸಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷೆ ಶೃತಿ, ಗೆಳೆಯರ ಬಳಗದ ಅಂಜುಜಾ ಮೂಡಲಗಿರಿಯಪ್ಪ, ಭಾಗ್ಯ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು.
ಮುಖ್ಯೋಪಾದ್ಯಾಯ ಎಂ.ಮಂಜಣ್ಣ ಸೇರಿದಂತೆ ಶಾಲೆ ಶಿಕ್ಷಕ-ಶಿಕ್ಷಕಿಯರು ಇದ್ದರು.

