ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಶ್ರೀಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ವತಿಯಿಂದ ನಡೆದ ಸರಸ್ವತಿ ಪೂಜಾ ಕಾರ್ಯಕ್ರಮದ ಅಂಗವಾಗಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ “ಪರೀಕ್ಷೆ ಭಯವನ್ನು ಎದುರಿಸುವುದು ಹೇಗೆ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿ, ಆಪ್ತ ಸಮಾಲೋಚಕರು ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಮಂಜುನಾಥ್ ಸ್ವಾಮಿ ಮಾತನಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಮತ್ತು ಒತ್ತಡವನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿದರು.
ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆತಂಕದ ಸಮಸ್ಯೆ ಅನುಭವಿಸುತ್ತಿದ್ದು ಒತ್ತಡ ನಿರ್ವಹಣೆ ಮಾಡಿಕೊಳ್ಳುವಲ್ಲಿ ಸೋಲುತ್ತಿದ್ದಾರೆ. ಮೊಬೈಲ್ ಚಟವು ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿದ್ದು ಅದನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಪರೀಕ್ಷೆ ಪೂರ್ವ ಸಿದ್ದತೆಯ ಬಗ್ಗೆ ಅರಿವು ಮೂಡಿಸಿದರು.
ಶ್ರೀ ಸಾಯಿನಾಥ ಸ್ವಾಮೀಜಿ ಮಾತನಾಡಿ “ಹದಿಹರೆಯದ ಮನಸ್ಸಗಳು ಬಹಳ ಸೂಕ್ಷ್ಮವಾಗಿದ್ದು ಗೊಂದಲಮಯವಾಗಿರುತ್ತದೆ ಹಾಗೂ ಸಾಕಷ್ಟು ಬೇಡದ ವಿಷಯಗಳು ತುಂಬಿಕೊಂಡು ಕಲುಷಿತವಾಗಿರುತ್ತದೆ. ಇವುಗಳನ್ನು ಶಿಸ್ತು, ಸಂಯಮ ಮತ್ತು ತಾಳ್ಮೆಯಿಂದ ಸಂಸ್ಕರಿಸಿ ಶುದ್ದವಾಗಿಸಿ ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಆಡಳಿತ ಮಂಡಳಿಯ ನಿರ್ದೇಶಕ ಹಿರಿಯಣ್ಣ ಹೆಗಡೆ, ಕೋಳಿಗೆ ವಾಸಪ್ಪ ಗೌಡ, ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲಾ ಶಾಖೆಗಳ ಪ್ರಾಂಶುಪಾಲೆ ದಿವ್ಯ ಕರಣಂ, ಗೀರಿಶ್, ಸುರೇಶ್, ರಮೇಶ್, ಎಸ್.ವಿ.ಗುರುರಾಜ್ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕರು ಹಾಗೂ 300 ಕ್ಕೂ ಹೆಚ್ಚು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.