ಚಂದ್ರವಳ್ಳಿ ನ್ಯೂಸ್, ತುಮಕೂರು:
ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ತಿಪ್ಪೇಸ್ವಾಮಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಶನಿವಾರ ತುಮಕೂರಿನಲ್ಲಿ ನಡೆದಿದೆ.
ಶಿಕ್ಷಣ ಸಂಸ್ಥೆಯ ಮುಖಂಡರು, ಮಾಜಿ ಶಾಸಕ ದಿವಂಗತ ದಾಸಪ್ಪ ಅವರ ಅಳಿಯ ವಿ.ಟಿ.ತಿಪ್ಪೇಸ್ವಾಮಿ ಅಪಘಾತದಲ್ಲಿ ಸಾವು ಕಂಡಿದ್ದಾರೆ.
ನಗರದ ಟೂಡಾ ಕಚೇರಿ ಬಳಿ ಬೆಳಗ್ಗೆ ಮನೆಗೆ ಹಾಲು ತರಲು ಹೋದಾಗ ಬೆಳಗುಂಬ ರಸ್ತೆಯಲ್ಲಿ ಅವಘಡ ನಡೆದಿದೆ.
ಹಿಂಬದಿಯಿಂದ ಬಂದ ಬೈಕ್ ಸವಾರ ರಿಲ್ಲಿಂಗ್ ಮಾಡುತ್ತಲೇ ಡಿಕ್ಕಿ ಹೊಡೆದನೆಂದು ಕೆಲವರು ಹೇಳುತ್ತಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ. ತಲೆಗೆ ಮತ್ತು ಕಾಲುಗಳಿಗೆ ಪೆಟ್ಟಾಗಿ ರಸ್ತೆಯಲ್ಲೇ ಕುಸಿದು ಬಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಸುಮಾರು 9.30 ಗಂಟೆಯ ವೇಳೆಗೆ ಚಿಕಿತ್ಸೆ ಫಲಿಸದೆ ಮರಣ ಹೊಂದಿದರೆಂದು ಕುಂಟುಬದ ಮೂಲಗಳು ತಿಳಿಸಿವೆ.
ಮೃತರು ತುಮಕೂರು ಸಮೀಪದ ಸತ್ಯಮಂಗದ ರಂಗಪ್ಪ ಲೇಔಟ್ ನಲ್ಲಿ ಹೇಮಾದ್ರಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುತ್ತಿದ್ದರು. ಆರಂಭದಲ್ಲಿ ಆದರ್ಶನಗರದಲ್ಲಿ ಸಮಾಜಕಾರ್ಯ ಶಿಕ್ಷಣದ ಹೇಮಾದ್ರಿ ಕಾಲೇಜು ಆರಂಭಿಸಿದ್ದ ಇವರು ನಂತರ ಸತ್ಯಮಂಗಲ ಬಳಿ ಇರುವ ಪ್ರದೇಶದಲ್ಲಿ ವಿವಿಧ ಕೋರ್ಸಗಳ ಶಾಲಾ ಕಾಲೇಜು ಸ್ಥಾಪನೆ ಮಾಡಿ ಉತ್ತಮ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯ ಬಂಧುಮಿತ್ರರನ್ನು ಅಗಲಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಂತ್ಯ ಸಂಸ್ಕಾರ ಭಾನುವಾರ ಸಂಜೆ ನಡೆಯಿತು ಎಂದು ಕುಟುಂಬದ ಸದಸ್ಯರು ತಿಳಿಸಿದರು.