ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಕೊಪ್ಪಳದಲ್ಲಿ ಅತ್ಯಾಚಾರ ನಡೆದಿದ್ದು ಈ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಗೃಹ ಸಚಿವರು, ಕಳೆದ ಮಾರ್ಚ್ 6ರಂದು ನಾಲ್ವರು ತುಂಗಾಭದ್ರಾ ನದಿ ಸಮೀಪದ ಹೋಮ್ ಸ್ಟೇನಲ್ಲಿ ಉಳಿದುಕೊಂಡಿದ್ದರು. ಈ ಪೈಕಿ ಇಬ್ಬರು ವಿದೇಶಿಯರು, ಇಬ್ಬರು ಭಾರತೀಯರಿದ್ದರು. ಊಟವಾದ ಮೇಲೆ ರಾತ್ರಿ ನಕ್ಷತ್ರ ವೀಕ್ಷಣೆಗೆ ತುಂಗಭದ್ರಾ ಎಡದಂಡೆ ನಾಲೆಯ ಬಳಿ ಹೋಗಿದ್ದಾರೆ. ಗಿಟಾರ್ ಬಾರಿಸಿಕೊಂಡು, ಗಾಯನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ಮೋಟಾರ್ ಬೈಕಿನಲ್ಲಿ ಅಲ್ಲಿಗೆ ಬಂದು, ಪೆಟ್ರೋಲ್ ಸಿಗುತ್ತಾ ಅಂತ ಕೇಳಿ ಬಳಿಕ ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಆರೋಪಿಗಳಾದ ಮಲ್ಲೇಶ, ಚೇತನ್ ಗಂಗಾವತಿಯವರು. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಮಾದಕ ವಸ್ತುಗಳ ಬಳಕೆ ಕಂಡುಬಂದಿಲ್ಲ. ನಕ್ಷತ್ರ ವೀಕ್ಷಣೆಗೆ ಯಾರಿಗೂ ಹೇಳದೇ ಪ್ರವಾಸಿಗರು ಹೋಗಿದ್ದಾರೆ. ಅದು ನಿರ್ಜನ ಪ್ರದೇಶವಾಗಿತ್ತು ಎಂದು ತಿಳಿಸಿದರು.
ಅತ್ಯಾಚಾರ ಆರೋಪಿಗಳಾದ ಮಲ್ಲೇಶ್, ಚೇತನಾ ಸಾಯಿರಾಮ್ ಎಂಬವರನ್ನು ಪೊಲೀಸರು ಶನಿವಾರವೇ ಬಂಧಿಸಿದ್ದಾರೆ. ಮೂರನೇ ಆರೋಪಿ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಅತ್ಯಾಚಾರಕ್ಕೊಳಗಾದ ವಿದೇಶಿ ಪ್ರವಾಸಿಗರಿಗೆ ಚಿಕಿತ್ಸೆ, ನೆರವು, ಅವರ ದೇಶದ ರಾಯಭಾರ ಕಚೇರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.