ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಶೈಕ್ಷಣಿಕ ಕ್ಷೇತ್ರಕ್ಕೆ ಪೆಟ್ಟು ಬೀಳಲಿದೆ ಎಂಬ ಮಾತು ಅಕ್ಷರಶಃ ಸತ್ಯ. 9 ವಿಶ್ವವಿದ್ಯಾನಿಲಯಗಳಿಗೆ ಬೀಗ ಜಡಿಯಲು ಹೊರಟು ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿನ ಶಿಕ್ಷಣ ಭಾಗ್ಯ ಕಸಿಯಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಒಂದೆಡೆಯಾದರೆ ಮತ್ತೊಂದೆಡೆ ಇರುವ ವಿಶ್ವವಿದ್ಯಾಲಯಗಳ ಪರಿಸ್ಥಿತಿ ಶೋಚನೀಯ ಹಂತ ತಲುಪಿರುವುದು ಆರ್ಥಿಕ ದಿವಾಳಿ ಅಂಚಿಗೆ ತಲುಪಿರುವ ಸರ್ಕಾರದ ದುಸ್ಥಿತಿಯನ್ನು ಸಾಕ್ಷೀಕರಿಸುತ್ತಿದೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಶಿಕ್ಷಣದ ದೂರದೃಷ್ಟಿ ಹಾಗೂ ಉನ್ನತ ಶಿಕ್ಷಣದ ಹಕ್ಕು ಪ್ರತಿಯೊಬ್ಬ ವಿದ್ಯಾರ್ಥಿಗೆ ಸರಳವಾಗಿ, ಸುಲಭವಾಗಿ ದೊರೆಯಬೇಕು ಎಂಬ ಮಹತ್ವದ ಉದ್ದೇಶದಿಂದ 9 ವಿಶ್ವವಿದ್ಯಾನಿಲಯಗಳನ್ನು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದಿತ್ತು, ಇವುಗಳ ಅಭಿವೃದ್ಧಿಗಾಗಿ ಮೀಸಲಿರಿಸ ಬೇಕಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿಕೊಳ್ಳುವ ಕಾರಣಕ್ಕಾಗಿ ವಿ, ವಿ. ಗಳನ್ನು ಮುಚ್ಚಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಶಿಕ್ಷಣ ಹಾಗೂ ಅಭಿವೃದ್ಧಿ ವಿರೋಧಿಯ ಧೋರಣೆಯಲ್ಲದೇ ಬೇರೇನೂ ಅಲ್ಲ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ದಕ್ಷಿಣ ಭಾರತದಲ್ಲಿಯೇ ಕರ್ನಾಟಕ ರಾಜ್ಯ ‘ಶಿಕ್ಷಣದ ಕಾಶಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಆದರೆ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ 9 ವಿವಿಗಳಿಗೆ ಕಾಯಂ ಕುಲಪತಿಗಳಿಲ್ಲ, ಅರ್ಧಕ್ಕೂ ಹೆಚ್ಚು ಬೋಧಕರ ಕೊರತೆ, ಬೋಧಕೇತರ ಸಿಬ್ಬಂದಿ ಕೊರತೆ, ವಿದ್ಯುತ್ ಬಿಲ್ ಪಾವತಿಗೂ ಪರದಾಡುವ ಸ್ಥಿತಿಗೆ ತಲುಪಿರುವುದು ದುರಂತವೇ ಸರಿ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ. ‘ಯಾವ ಗ್ಯಾರಂಟಿ ಕೊಡದಿದ್ದರೂ ಶಿಕ್ಷಣದ ಗ್ಯಾರಂಟಿ ಕಸಿದುಕೊಳ್ಳದಿರಲಿ‘ ಎಂದು ನಾಡಿನ ಲಕ್ಷಾಂತರ ವಿದ್ಯಾರ್ಥಿಗಳು ಈ ಸರ್ಕಾರದ ವಿರುದ್ಧ ಆಕ್ರೋಶಿತಗೊಂಡಿದ್ದಾರೆ. ಈ ಕೂಡಲೇ ಸರ್ಕಾರ ನಾಡಿನ ವಿಶ್ವವಿದ್ಯಾನಿಲಯಗಳ ಅಸ್ತಿತ್ವವನ್ನು ಉಳಿಸಿ ಅಭಿವೃದ್ಧಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.