ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕೀಲೆ ಎಸ್.ಜೀವಾ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿಯ ಡಿವೈಎಸ್‌ಪಿ ಕನಕಲಕ್ಷ್ಮಿ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್ ಪೂರೈಕೆ ಮಾಡುತ್ತಿದ್ದ ವಕೀಲೆ ಎಸ್.ಜೀವಾ ಕಳೆದ ನವೆಂಬರ್-22 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ವಕೀಲೆ ಜೀವಾ ಡೆತ್ ನೋಟ್ ಬರೆದಿಟ್ಟು ಬನಶಂಕರಿಯ ರಾಘವೇಂದ್ರ ಲೇಔಟ್ನಲ್ಲಿರುವ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಆತ್ಮಹತ್ಯೆ ಪ್ರಕರಣದಲ್ಲಿ ಸದ್ಯ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಲಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಭೋವಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮಗಳ ಕುರಿತಾದ ವಿಚಾರಣೆಗೆ ಹಾಜರಾಗಿದ್ದ ಜೀವಾಗೆ ಸಿಐಡಿಯ ಡಿವೈಎಸ್‌ಪಿ ಕನಕಲಕ್ಷ್ಮಿ ಮಾನಸಿಕ ಕಿರುಕುಳ ನೀಡಿದ್ದಲ್ಲದೆ 25 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಮೃತಳ ಸಹೋದರಿ ಸಂಗೀತಾ ಆರೋಪಿಸಿದ್ದರು.
ಅಲ್ಲದೆ ತನ್ನ ಸಹೋದರಿ ಜೀವಾ ಬರೆದಿಟ್ಟಿದ್ದ ಸುಮಾರು 10ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್‌ಗಳ ಸಮೇತ ಅವರ ಸಹೋದರಿ ಸಂಗೀತಾ ಬನಶಂಕರಿ ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಬನಶಂಕರಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಸಿಸಿಬಿ ಪೊಲೀಸರಿಗೆ ವಹಿಸಿದ್ದರು. ನಂತರದ ಬೆಳವಣಿಗೆಯಿಂದಾಗಿ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಲಾಗಿತ್ತು.