ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಬಿಟ್ಟು, ಪೂರ್ವಭಾವಿ ತಯಾರಿ ಮಾಡಿಕೊಂಡು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತ ಲಭಿಸುತ್ತದೆ ಎಂದು ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ದೇವರಾಜ ಅರಸು ವಿದ್ಯಾಸಂಸ್ಥೆಯ ಆರ್.ಎಲ್.ಜಾಲಪ್ಪ ಕಲಾಮಂದಿರದಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಉತ್ತೇಜನ ಕಾರ್ಯಕ್ರಮದಲ್ಲಿ ಮಾತನಾಡಿ, ಪರೀಕ್ಷೆಗೆ ಸರಿಯಾಗಿ ತಯಾರಿ ಮಾಡಿಕೊಳ್ಳದಿದ್ದಾಗ ಭಯ ಬೀಳುವುದು ಸಾಮಾನ್ಯ.
ಪರೀಕ್ಷೆಗಳ ಭಯದಿಂದಾಗಿ ಎಷ್ಟೋ ವಿದ್ಯಾರ್ಥಿಗಳು, ಓದಿದ್ದನ್ನು ಮರೆತು ಅನುತ್ತೀರ್ಣರಾಗುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನಿಯಮಿತವಾಗಿ ಓದುವ ಅಭ್ಯಾಸ ಕ್ರಮವನ್ನು ರೂಢಿಸಿಕೊಳ್ಳಬೇಕು. ಬೆಳಗಿನ ಜಾವ ಓದುವುದು ಉತ್ತಮ ಅಭ್ಯಾಸವಾಗಿದ್ದು, 45 ನಿಮಿಷ ಓದಿ, ಓದಿದ್ದನ್ನು ಮನನ ಮಾಡಿಕೊಳ್ಳಬೇಕು.
ಓದಿದ್ದನ್ನು ಒಂದು ಬಾರಿ ಬರೆಯಬೇಕು. ಇನ್ನೂ ಮನನವಾಗದಿದ್ದರೆ ಮತ್ತೊಬ್ಬರಿಗೆ ಹೇಳಬೇಕು. ಅಧ್ಯಾಯವಾರುಪಟ್ಟಿ ಮಾಡಿಕೊಂಡು ಓದಬೇಕು ಎಂದು ವಿಧ್ಯಾರ್ಥಿಗಳಿಗೆ ತಿಳುವಳಿಕೆ ಹೇಳಿದರು.