ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಾಂತಿಯುತ ಸಹಬಾಳ್ವೆ ಸಮಾಜ ನಿರ್ಮಾಣ ಆಗಬೇಕಾದರೆ ಜಗದ್ಗುರು ರೇಣುಕಾಚಾರ್ಯರ ಸಂದೇಶ, ಮೌಲ್ಯಗಳು ದಾರಿದೀಪ ಎಂದು ದಾವಣಗೆರೆ ಜಿಲ್ಲೆ ಹರಿಹರ ಗಿರಿಯಮ್ಮ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೊ.ಗುರುಬಸವ ಹಿರೇಮಠ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದಾನವ ಗುಣಗಳನ್ನು ಹೋಗಲಾಡಿಸಿ, ಬದುಕಿನ ಸಹಬಾಳ್ವೆಯ ಶಾಂತಿ, ಸಹನೆಯ ಎಲ್ಲ ಮಾರ್ಗಗಳನ್ನು, ಮಾನವನು ದೇವ ಮಾನವನಾಗುವ ಗುಣಗಳನ್ನು ನಮ್ಮೆಲ್ಲರಿಗೂ ನೀಡಿದ ದಶಸೂತ್ರಗಳೊಂದಿಗೆ ಸರ್ವರ ಜೀವನದಲ್ಲಿ ಸರ್ವ ಕಾಲಕ್ಕೂ ಉತ್ತಮ ಯೋಗಗಳನ್ನು ಅಳವಡಿಸಿಕೊಳ್ಳಲು ಕಾರಣಕರ್ತರಾದ ಜಗದ್ಗುರು ರೇಣುಕಾಚಾರ್ಯರ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಿದೆ ಎಂದು ಹೇಳಿದರು.
ಜಗದ್ಗುರು ರೇಣುಕಾಚಾರ್ಯರ ಆದರ್ಶ, ಮೌಲ್ಯಗಳು ನಮ್ಮ ಬದುಕಿಗೆ ದಾರಿದೀಪವಾಗಲಿ ಎಂದು ತಿಳಿಸಿದ ಅವರು, ಮನುಕುಲದ ಉದ್ಧಾರಕ್ಕೆ ಸಂದೇಶಗಳನ್ನು ಸಾರಿದ ಮಹನೀಯರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳಡಿಸಿಕೊಂಡು ಮುಂದಿನ ಪೀಳಿಗೆಗೆ ಸಂಸ್ಕøತಿ, ಸಂಸ್ಕಾರ ಉಣಬಡಿಸುವ ಮೂಲಕ ಮತ್ತೊಮ್ಮೆ ಈ ಹಿಂದಿನ ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಕೈಜೋಡಿಸೋಣ ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜಾತಿ ಸಂಕೋಲೆ ಮೀರಿ ಮಹನೀಯರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ಸ್ಮರಣೆ ಹಾಗೂ ಮುಂದಿನ ಪೀಳಿಗೆಗೆ ಇವರ ಕೊಡುಗೆಗಳನ್ನು ತಿಳಿಸುವ ದೃಷ್ಠಿಯಿಂದ ರಾಜ್ಯ ಸರ್ಕಾರ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸಮಾಜ ಮತ್ತು ಸಂಸ್ಕøತಿ ಎರಡೂ ಒಟ್ಟೊಟ್ಟಿಗೆ ಹೋದಾಗ ಮಾತ್ರ ಮನುಕುಲಕ್ಕೆ ಉತ್ತಮವಾದ ಸಂದೇಶ ನೀಡಲು ಸಾಧ್ಯ. ಅಧ್ಯಯನಶೀಲರಾದಾಗ ಮಾತ್ರ ಧರ್ಮದ ಸಾರ ಮತ್ತು ಸಂಸ್ಕøತಿ ಅಳವಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಮಹನೀಯರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಮಹನೀಯರ, ದಾರ್ಶನಿಕರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ. ಜಯಂತಿ ಆಚರಣೆಯ ಜೊತೆಗೆ ಸಮಾಜದಲ್ಲಿ ಉತ್ತಮ ಸಾಧನೆ ತೋರಿದ ಸಾಧಕರಿಗೆ ಸನ್ಮಾನ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಜಯಂತಿ ಕಾರ್ಯಕ್ರಮಗಳು ಆಗಬೇಕು ಎಂದು ತಿಳಿಸಿದ ಅವರು, ಶರಣರ ನಡೆ-ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನುಡಿದಂತೆ ನಡೆಯುವ ಸಂಸ್ಕøತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ, ವೀರಶೈವ ಸಮಾಜ ಅಧ್ಯಕ್ಷ ಹೆಚ್.ಎನ್.ತಿಪ್ಪೇಸ್ವಾಮಿ, ಅಖಿಲ ಭಾರತ ವೀರಶೈವ ಸಮಾಜ ಪ್ರಧಾನ ಕಾರ್ಯದರ್ಶಿ ಎಂ.ಶಶಿಧರ ಬಾಬು, ಜಿಲ್ಲಾ ಜಂಗಮ ಸಮಾಜ ಅಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಷಡಾಕ್ಷರಯ್ಯ, ಮುಖಂಡರಾದ ಕೆ.ಎಂ.ವೀರೇಶ್, ಕೆಇಬಿ ಷಣ್ಮುಖಪ್ಪ, ಎ.ಜಿ. ಮಠದ್, ಕುಮಾರಸ್ವಾಮಿ, ಕೆ.ಸಿ.ರುದ್ರೇಶ್, ಲೀಲಾವತಿ, ಶಾಂತಲಾ, ಬಸವರಾಜ್, ಸುರೇಶ್, ವೀರೇಂದ್ರ ಕುಮಾರ್ ಮುಂತಾದ ಗಣ್ಯರು ಇದ್ದರು. ಕೆಪಿಎಂ ಗಣೇಶಯ್ಯ ಮತ್ತು ತಂಡ ಗೀತಗಾಯನ ನಡೆಸಿಕೊಟ್ಟರು.