ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಇಂದು ವಿಧಾನಸಭಾ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ಖಾಲಿ ಇರುವ 120 ತಜ್ಞ ವೈದ್ಯರು ಹಾಗೂ 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದ್ದು, ಸದರಿ ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿಯಡಿ ಭರ್ತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇಲಾಖೆಯಲ್ಲಿ ಕಾಲಕಾಲಕ್ಕೆ ಖಾಲಿಯಾಗುವ ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿ, ಮುಂಬಡ್ತಿ, ಗುತ್ತಿಗೆ ಆಧಾರದಡಿ, ವರ್ಗಾವಣೆ ಮೂಲಕ ಭರ್ತಿ ಮಾಡುವ ಮೂಲಕ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.
2017-18 ಮತ್ತು 2019-20ನೇ ಸಾಲಿನಲ್ಲಿ ರಾಜ್ಯದಲ್ಲಿ 62 ಹೊಸ ತಾಲ್ಲೂಕುಗಳನ್ನು ರಚಿಸಲಾಗಿದ್ದು, ಇದರಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕು ಸಹ ಒಳಗೊಂಡಿರುತ್ತದೆ. ಹೊಸದಾಗಿ ರಚಿಸಲಾದ 62 ತಾಲ್ಲೂಕುಗಳಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದ್ದು ಆರ್ಥಿಕ ಇಲಾಖೆ ಸಹಮತಿ ಸ್ವೀಕೃತವಾದ ಕೂಡಲೇ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಹೊಸ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಗೆ ಹುದ್ದೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.