ಬಿಜೆಪಿ ಸರ್ಕಾರದ ಶೇ.40ರಷ್ಟು ಭ್ರಷ್ಟಾಚಾರ ಕುರಿತ ವರದಿ ಸಲ್ಲಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದವರು ಮಾಡಿದ ಆರೋಪಗಳು ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೀಳು ಕಾಲುವೆಗಳ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಬಗ್ಗೆ ಕೇಳಿ ಬಂದ ಆರೋಪಗಳ ಕುರಿತು ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರ ಆಯೋಗವು ನಡೆಸಿದ ತನಿಖೆಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.
ಗುತ್ತಿಗೆದಾರರು ಶೇ. 40ರಷ್ಟು ಕಮಿಷನ್ ಆರೋಪ ಮಾಡಿದ ಪ್ರಕರಣದ ವಿಚಾರಣೆ ಬಹುದೊಡ್ಡ ಚಾಲೆಂಜಿಂಗ್ ಟಾಸ್ಕ್
ಆಗಿತ್ತು ಎಂದು ಗುತ್ತಿಗೆದಾರರ ಪ್ರಕರಣದ ನ್ಯಾಯಾಂಗ ವಿಚಾರಣಾ ಆಯೋಗ ಅಧ್ಯಕ್ಷ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಹೇಳಿದರು.

ಗುತ್ತಿಗೆದಾರರ ಸಂಘದ ಕಮಿಷನ್ ಆರೋಪಗಳ ಬಗ್ಗೆ ತನಿಖೆ ನಡೆಸಿ 20 ಸಾವಿರ ಪುಟಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುಧವಾರ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಗುತ್ತಿಗೆದಾರರ ಕಮಿಷನ್ ಆರೋಪಗಳ ಬಗ್ಗೆ ತನಿಖೆ ನಡೆಸುವುದು
, ಸಾಕ್ಷಿಗಳ ವಿಚಾರಣೆ ನಡೆಸಿ ನ್ಯಾಯಾಂಗ ವಿಚಾರಣಾ ಆಯೋಗವು ಸೂಕ್ತ ತೀರ್ಮಾನ ತೆಗೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವುದು ಬಹಳ ದೊಡ್ಡ ಟಾಸ್ಕ್ ಆಗಿತ್ತು ಎಂದು ತಿಳಿಸಿದರು.

ಆಯೋಗದ ಅಧಿಕಾರಿ, ಸಿಬ್ಬಂದಿಗಳ ಪರಿಶ್ರಮ ಮತ್ತು ಸಹಕಾರದಿಂದ ಸುದೀರ್ಘ ತನಿಖಾ ವರದಿ ತಯಾರಿಸಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ನ್ಯಾ.ನಾಗಮೋಹನದಾಸ್ ಹೇಳಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಟೆಂಡರ್ ಕಾಮಗಾರಿಗಳಲ್ಲಿ ಶೇ.40ಕ್ಕಿಂತ ಅಧಿಕ ಕಮಿಷನ್ ನೀಡುವ ಪದ್ಧತಿ ಜಾರಿಯಲ್ಲಿದೆ ಎಂದು ಗುತ್ತಿಗೆದಾರರ ಸಂಘ ಸಲ್ಲಿಸಿದ್ದ ದೂರುಗಳು, ಟೆಂಡರ್ ಕರೆಯುವಾಗ ಪ್ಯಾಕೇಜ್ ಪದ್ಧತಿ ಕೈಬಿಡುವುದು, ಎಸ್‌ಆರ್ ದರಪಟ್ಟಿ ನಿಗದಿ, ಸ್ಟಾರ್ ರೇಟ್ ಪದ್ಧತಿ ಜಾರಿ, ಪಾರದರ್ಶಕತೆ ಕಾಪಾಡಿಕೊಳ್ಳುವುದು, ಸೀನಿಯಾರಿಟಿ ಮೇಲೆ ಬಿಲ್ ಪಾವತಿ, ಕೆಆರ್‌ಐಡಿಎಲ್‌ನಿಂದ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿ ನೀಡಿಕೆ ತಪ್ಪಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಗುತ್ತಿಗೆದಾರರ ಸಂಘವು ದೂರು ಸಲ್ಲಿಸಿತ್ತು. ಗುತ್ತಿಗೆದಾರರ ಸಂಘದ ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿವರವಾದ ಅಧ್ಯಯನ ನಡೆಸಿರುವ ಆಯೋಗ ಸರ್ಕಾರಕ್ಕೆ ವಸ್ತುನಿಷ್ಠ ವರದಿ ಸಲ್ಲಿಸಿದೆ ಎಂದು ನ್ಯಾಯಾಧೀಶರು ತಿಳಿಸಿದರು.

 ಕಮಿಷನ್ ಆರೋಪಗಳು ಸಾರ್ವಜನಿಕ ಕಾಮಗಾರಿಗಳಿಗೆ ಸಂಬಂಧಪಟ್ಟಿರುವ ಆರೋಪಗಳಾಗಿದ್ದರಿಂದ ಸಾರ್ವಜನಿಕರ ಹೇಳಿಕೆಗಳು ಮತ್ತು ವಿವರಗಳು ಬಹಳ ಮುಖ್ಯ. ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ಆಯೋಗ ಕೂಲಂಕಷವಾಗಿ ತನಿಖೆ ನಡೆಸಿದ್ದು, ಸಲಹೆ ಮತ್ತು ವಿಚಾರಣಾ ಆಯೋಗದ ಅಭಿಪ್ರಾಯಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರದ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ 5 ಪ್ರಮುಖ ಇಲಾಖೆಗಳಲ್ಲಿ ದಿನಾಂಕ 16-7-2019ರಿಂದ 31-3-2023ರ ಅವಧಿಯಲ್ಲಿ ನಡೆದ ಎಲ್ಲಾ ಕಾಮಗಾರಿಗಳ ತನಿಖೆ ನಡೆಸಿ ವರದಿ ನೀಡಲು ತಿಳಿಸಿತ್ತು. ವಿಚಾರಣಾ ಆಯೋಗ ವೈಜ್ಞಾನಿಕವಾಗಿ ರ್ಯಾಂಡಮ್ ಮಾದರಿಯಲ್ಲಿ ಕೆಲ ಪೂರ್ಣಗೊಂಡ ಕಾಮಗಾರಿಗಳ ಆಯ್ಕೆ ಮಾಡಿ ತನಿಖೆ ನಡೆಸಿದೆ ಎಂದು ನ್ಯಾ.ನಾಗಮೋಹನದಾಸ್ ಮಾಹಿತಿ ನೀಡಿದ್ದಾರೆ.

ದೂರುಗಳಿಗೆ ಸಂಬಂಧಿಸಿದ ಆಯ್ದ ಸ್ಥಳ ಪರಿಶೀಲನೆ ಮಾಡಲಾಗಿದೆ. ಅಲ್ಲದೆ ಕಡತ ಹಾಗೂ ಲೆಕ್ಕ ಪತ್ರಗಳ ಪರಿಶೀಲನೆ ನಡೆಸಲಾಗಿದೆ. ತನಿಖಾ ವರದಿ ಅನುಬಂಧಗಳು ಸೇರಿದಂತೆ ಸುಮಾರು 20 ಸಾವಿರ ಪುಟಗಳ ಸಮಗ್ರ ವಿಚಾರಣಾ ವರದಿ ಸಿದ್ಧ ಪಡಿಸಿ ಸಲ್ಲಿಸಲಾಗಿದೆ ಎಂದು  ನ್ಯಾ.ನಾಗಮೋಹನದಾಸ್ ತಿಳಿಸಿದರು.
ಆದರೆ ಯಾವುದೇ ಕಾರಣಕ್ಕೂ ವರದಿಯ ಶಿಫಾರಸುಗಳನ್ನು ತಾವು ಬಹಿರಂಗ ಪಡಿಸುವುದು ನೈತಿಕವೆನಿಸದು ಎಂದು ಇದೇ ಸಂದರ್ಭದಲ್ಲಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

 ರಾಜ್ಯ ಸರ್ಕಾರಕ್ಕೆ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗಳಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಉಪ ಕಾಲುವೆಗಳ ಆಧುನೀಕರಣ ಅಂದಾಜು ಪಟ್ಟಿ ಬಗ್ಗೆಯೂ 2,800 ಪುಟಗಳ ತನಿಖಾ ವರದಿಯನ್ನು ನ್ಯಾಯಾಂಗ ತನಿಖಾ ಆಯೋಗವು ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಆಯೋಗದ ಅಧಿಕಾರಿಗಳು ಮತ್ತಿತರರು ಇದ್ದರು.

 

- Advertisement -  - Advertisement - 
Share This Article
error: Content is protected !!
";