ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದುಬೈನಿಂದ ಅಕ್ರಮವಾಗಿ 14 ಕೋಟಿ ರೂ. ಮೌಲ್ಯದ ಚಿನ್ನವನ್ನು ಬೆಂಗಳೂರಿಗೆ ಸಾಗಿಸಿರುವ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ವಿರುದ್ಧ ಯಾವುದೇ ರೀತಿಯ ಸುಳ್ಳು ಮತ್ತು ಆಧಾರ ರಹಿತ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನ್ಯಾಯಾಲಯ ನಿರ್ಬಂಧಕಾಜ್ಞೆ ಆದೇಶ ಹೊರಡಿಸಿದೆ.
ಇದೇ ವೇಳೆ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದೆ.
ಅಕ್ರಮ ಚಿನ್ನ ಸಾಗಾರಟ ಆರೋಪಿ ರನ್ಯಾ ರಾವ್ ಅವರ ತಾಯಿ ಹೆಚ್.ಪಿ.ರೋಹಿಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 15ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಈ ಆದೇಶವನ್ನು ಎಲ್ಲ ಮಾಧ್ಯಮಗಳಿಗೂ ನೀಡಿದೆ.
ರನ್ಯಾ ರಾವ್ ಜಾಮೀನು ತೀರ್ಪು: ರನ್ಯಾ ರಾವ್ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ಮಾ.14ರಂದು ಶುಕ್ರವಾರ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ನ್ಯಾಯಾಧೀಶರಾದ ವಿಶ್ವನಾಥ ಸಿ.ಗೌಡರ್ ತೀರ್ಪು ಕಾಯ್ದಿಸಿದ್ದಾರೆ.
ಸಿಐಡಿ ತನಿಖೆ ವಾಪಸ್: ಅಕ್ರಮ ಚಿನ್ನ ಸಾಗಾಟದ ಆರೋಪಿ ರನ್ಯಾ ರಾವ್ ವಿರುದ್ಧದ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಸಿಐಡಿ ತನಿಖೆ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಇದೇ ಪ್ರಕರಣವನ್ನು ಈಗಾಗಲೇ ಸಿಬಿಐ, ಡಿಆರ್ಐ ಕೂಡ ತನಿಖೆ ನಡೆಸುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತಾರನ್ನು ನೇಮಿಸಿ, ಶಿಷ್ಟಾಚಾರ ಉಲ್ಲಂಘನೆ ಹಾಗೂ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಪಾತ್ರದ ಬಗ್ಗೆ ತನಿಖೆ ನಡೆಸಿ ವರದಿಯನ್ನು ಒಂದು ವಾರದಲ್ಲಿ ಸಲ್ಲಿಸುವಂತೆ ಸೂಚಿಸಿ ಆದೇಶಿಸಿದೆ.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಸಿಐಡಿ ತನಿಖೆಗೂ ಆದೇಶ ಹೊರಡಿಸಿತ್ತು. ಈ ತನಿಖಾ ಸಂಸ್ಥೆಗಳು ಈಗಾಗಲೇ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಒಂದೇ ದಿನದಲ್ಲೇ ಸಿಐಡಿ ತನಿಖಾ ಆದೇಶ ಹಿಂಪಡೆದಿರುವುದು ಸೋಜಿಗವಾಗಿದೆ.