ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ 138 ಸ್ಥಾನಗಳನ್ನು ಗಳಿಸಿ ದಾಖಲೆ ಬರೆದಿರುವ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷ ಹೈಕಮಾಂಡ್ ಎಚ್ಚರಿಕೆಯನ್ನು ಧಿಕ್ಕರಿಸಿ ಸಚಿವರು, ಶಾಸಕರು ನೀಡುತ್ತಿರುವ ವಿಭಿನ್ನ ಹೇಳಿಕೆಗಳು ಒಂದು ಕಡೆಯಾದರೆ ಮುಖ್ಯಮಂತ್ರಿ ಗಾದಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ಕಳೆದ ಕೆಲವು ದಿನಗಳಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಹೊಸದಲ್ಲ.
ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಡು ಎಚ್ಚರಿಕೆ ನಂತರ ಒಂದಿಷ್ಟು ಹೇಳಿಕೆಗಳಿಗೆ ತಡೆಯಾದರೂ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುವ ಸಂದರ್ಭದಲ್ಲಿ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸದನದಲ್ಲೇ ಘೋಷಣೆ ಮಾಡುತ್ತಿದ್ದಂತೆ ರಾಜಕೀಯವಾಗಿ ಸಾಕಷ್ಟು ಬಿರುಗಾಳಿ ಎಬ್ಬಿಸಿದೆ. ಅಲ್ಲದೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಶಾಸಕರುಗಳಿಗೆ ಔತಣಕೂಟ ಆಯೋಜನೆ ಮಾಡಲು ಗಂಭೀರ ಚಿಂತನೆ ಮಾಡಿದ್ದಾರೆ.
ಬೆಂಗಳೂರು ನಗರದ ಖಾಸಗಿ ಹೊಟೇಲ್ನಲ್ಲಿ ಅತಿ ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರಿಗೆ ಡಿನ್ನರ್ ಪಾರ್ಟಿ ಆಯೋಜಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡುವೆಯೂ ಡಿಕೆ ಶಿವಕುಮಾರ್ ಔತಣಕೂಟ ಸಾಹಸಕ್ಕೆ ಕೈಹಾಕಿದ್ದು ಭಾರಿ ಮಹತ್ವ ಪಡೆದಿದೆ. ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ್ದನ್ನೇ ನೆಪವಾಗಿಟ್ಟುಕೊಂಡು ಡಿಕೆ ಶಿವಕುಮಾರ್ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಅವರು ಮಾರ್ಚ್ 11 ಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಿದ್ದಾರೆ. ಇಷ್ಟೇ ಅಲ್ಲದೆ, ಪ್ರತಿ ಅಧಿವೇಶನ ಸಂದರ್ಭದಲ್ಲಿಯೂ ಡಿಕೆ ಶಿವಕುಮಾರ್ ಶಾಸಕರಿಗೆ ಡಿನ್ನರ್ ಆಯೋಜನೆ ಮಾಡುತ್ತಿದ್ದಾರೆ. ಈಗಲೂ ಎಲ್ಲ ಶಾಸಕರಿಗೆ ಔತಣಕೂಟ ಏರ್ಪಡಿಸಲು ಡಿಸಿಎಂ ಡಿ ಕೆ ಶಿವಕುಮಾರ್ ಮುಂದಾಗಿರುವುದು ಸಿಎಂ-ಡಿಸಿಎಂ ಬಣಗಳಲ್ಲಿ ಚುರುಕಿನ ರಾಜಕೀಯ ನಡೆಯುತ್ತಿರುವುದು ಕಂಡು ಬರುತ್ತಿದೆ.