ತೋಟಗಾರಿಕೆ ಬೆಳೆಗಳ ಇಳುವರಿಗೆ ಏನು ಕ್ರಮ: ರೈತರಿಗೆ ಸಲಹೆ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ತೋಟಗಾರಿಕೆ ಬೆಳೆಗಳು ಒಣಗುವ ಸಾಧ್ಯತೆಯಿದ್ದು, ಹೆಚ್ಚಿನ ಇಳುವರಿಗಾಗಿ ತೋಟಗಾರಿಕೆ ಬೆಳೆಗಾರರು  ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಇಲಾಖೆ ಸಲಹೆ ನೀಡಿದೆ.

        ಬೇಸಿಗೆ ಹಂಗಾಮಿನಲ್ಲಿ ತರಕಾರಿ ಬೀಜ ಅಥವಾ ಸಸಿಗಳನ್ನು ನಾಟಿ ಮಾಡುವ ಮುಂಚೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ನಂತರ ನಾಟಿ ಮಾಡಿದ್ದಲ್ಲಿ ಉತ್ತಮ ಬೆಳೆ ಮತ್ತು ಇಳುವರಿ ಪಡೆಯಬಹುದು.

ಪ್ರಮುಖ ಹಣ್ಣಿನ ಬೆಳೆಗಳಾದ ಮಾವು, ಬಾಳೆ, ಸಪೋಟ, ದಾಳಿಂಬೆ, ಪಪ್ಪಾಯ ಮತ್ತು ಇತರೆ ಹಣ್ಣಿನ ಬೆಳೆಗಳಿಗೆ ಹನಿ ನೀರಾವರಿ ಮುಖಾಂತರ ನೀರು ಉಣಿಸುವುದು, ಮರದ ಬುಡದ ಸುತ್ತ ಸಾವಯವ ಹೊದಿಕೆ(ಮಲ್ಚಿಂಗ್), ಅಂತರ ಬೆಳೆಯಾಗಿ ಹಸಿರೆಲೆ ಗೊಬ್ಬರಗಳಾದ ಡಯಾಂಚ ಅಥವಾ ಸೆಣಬು ಹಾಕುವುದರಿಂದ ಉತ್ತಮ ಫಸಲು ಪಡೆಯಬಹುದಲ್ಲದೆ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಬಹುದು.

ತೋಟದ ಬೆಳೆಗಳಾದ ತೆಂಗು ಮತ್ತು ಅಡಿಕೆ ಬೆಳೆಗಳಿಗೆ ಹನಿ ನೀರಾವರಿ ಮುಖಾಂತರ ನೀರು ಉಣಿಸಬೇಕು. ಇದರಿಂದ ಬೇಸಿಗೆ ಕಾಲದಲ್ಲಿ ಮರ ಒಣಗದಂತೆ ನೋಡಿಕೊಳ್ಳಬಹುದು. ಬುಡದ ಸುತ್ತ ಗುಣ ಮಾಡಿ ಸಾವಯವ ಹೊದಿಕೆ(ಮಲ್ಚಿಂಗ್), ಕೊಟ್ಟಿಗೆ ಗೊಬ್ಬರದ ಜೊತೆಗೆ ಬೋರಾಕ್ಸ್(ಪ್ರತಿ ಮರಕ್ಕೆ ೫೦ಗ್ರಾಂ), ಜಿಂಕ್ ಸಲ್ಫೇಟ್(ಪ್ರತಿ ಮರಕ್ಕೆ ೨೦ ಗ್ರಾಂ) ಹಾಗೂ ಹಸಿರೆಲೆ ಗೊಬ್ಬರಗಳಾದ ಡಯಾಂಚ ಅಥವಾ ಸೆಣಬನ್ನು ಬುಡದ ಸುತ್ತ ಹಾಕುವುದರಿಂದ ದೀರ್ಘಕಾಲ ನೀರಿನ ತೇವಾಂಶವನ್ನು ಕಾಪಾಡಬಹುದಾಗಿದೆ. ಇದರಿಂದ ಹರಳು ಉದುರುವುದು ಹಾಗೂ ಕೀಟ/ರೋಗ ಬಾಧೆಗಳನ್ನು ನಿಯಂತ್ರಣ ಮಾಡಬಹುದಲ್ಲದೆ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ.

 ಬೇಸಿಗೆ ಹಂಗಾಮಿನಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಅಡಿಕೆ ಗಿಡಗಳ ಕಾಂಡಕ್ಕೆ ಸೂರ್ಯನ ಕಿರಣಗಳು ನೇರವಾಗಿ ಬಿದ್ದು ಗಿಡದ ಕಾಂಡ ಸೀಳುವುದು ಮತ್ತು ಒಣಗುವ ಸಾಧ್ಯತೆ ಇರುತ್ತದೆ. ಅಡಿಕೆ ಗಿಡದ  ಕಾಂಡದ ಸುತ್ತ ಸುಣ್ಣದ ನೀರನ್ನು ಲೇಪನ ಮಾಡುವುದರಿಂದ ಗಿಡದ ಕಾಂಡ ಸೀಳುವುದು ಮತ್ತು ಒಣಗುವುದನ್ನು ತಡೆಗಟ್ಟಬಹುದು. ಅಲ್ಲದೆ ಸದೃಢವಾದ ಕಾಂಡದ ಜೊತೆಗೆ ಉತ್ತಮ ಗಿಡದ ಬೆಳವಣಿಗೆಗೆ ನೆರವಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ ತಿಳಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";