ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಧ್ಯ ಕರ್ನಾಟಕದ ಕೇಂದ್ರ ಬಿಂದುವಾದ ಚಿತ್ರದುರ್ಗ ಜಿಲ್ಲೆಯಲ್ಲಿ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ಘಟಕಗಳನ್ನೊಳಗೊಂಡು, ಚಿತ್ರದುರ್ಗ ವಿಭಾಗವು 2018-19 (2018ನೇ ಫೆಬ್ರವರಿ 09) ರಂದು ಪ್ರಾರಂಭಗೊಂಡಿದೆ. ಪ್ರಸ್ತುತ ಈ ವಿಭಾಗವು 309 ವಾಹನಗಳ ಬಲದಿಂದ ಪ್ರತಿ ನಿತ್ಯ 1.10 ಲಕ್ಷ ಕಿ.ಮಿ.ಗಳ ಕಾರ್ಯಾಚರಣೆ ಮಾಡುತ್ತಾ, ಸರಾಸರಿ 80 ರಿಂದ ಒಂದು ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಕರ್ಯ ಒದಗಿಸಲಾಗಿತ್ತಿದೆ.
ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 6 ತಾಲ್ಲೂಕುಗಳಿದ್ದು (ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಕೂರು, ಚಳ್ಳಕೆರೆ, ಹೊಸದುರ್ಗ ಮತ್ತು ಹೊಳಲ್ಕೆರೆ) ಹಾಗೂ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಸಹ ಚಿತ್ರದುರ್ಗ ವಿಭಾಗದ ವ್ಯಾಪ್ತಿಯಲ್ಲಿ ಬರುತ್ತದೆ.
ಪ್ರಸ್ತುತ ವಿಭಾಗವು ತನ್ನ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಒಟ್ಟು 4 ಘಟಕಗಳು, ಒಂದು ವಿಭಾಗೀಯ ಕಾರ್ಯಾಗಾರ ಮತ್ತು 6 ಬಸ್ ನಿಲ್ದಾಣಗಳನ್ನು ಹೊಂದಿದೆ. ಅಲ್ಲದೇ ಈಗಾಗಲೇ ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಗಳಲ್ಲಿ ಬಸ್ ಡಿಪೋ(ಘಟಕ)ಗಳು ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಹಂತದಲ್ಲಿವೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯೂರು ಡಿಪೋ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಿರಿಯೂರು ಡಿಪೋ ಆರಂಭವಾದರೆ ಅನೇಕ ಹೊಸ ಮಾರ್ಗಗಳಲ್ಲಿ ಸಾರಿಗೆ ಬಸ್ ಗಳ ಸಂಚಾರ ಆರಂಭಿಸಲಾಗುತ್ತದೆ. ಈಗಾಗಲೇ ಹಿರಿಯೂರು ಡಿಪೋ ಆರಂಭಿಸುವಂತೆ ಜನ ಸ್ನೇಹಿ, ಜನಪರ ಹೋರಾಟಗಾರರು, ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಿ ಡಿಪೋ ಆರಂಭಕ್ಕೆ ಗಡವು ನೀಡಿದ್ದರು. ಹಲವು ಕಾರಣಗಳಿಂದ ಡಿಪೋ ಆರಂಭ ವಿಳಂಬ ಆಗುತ್ತಿತ್ತು. ಆದರೆ ಡೀಸೆಲ್ ಪಂಪ್ ಸೇರಿದಂತೆ ಬಹುತೇಕ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಈಗಾಗಲೇ ಡೀಸೆಲ್ ಪಂಪ್ ರೆಡಿಯಾಗಿ ಕಳೆದ ಒಂದು ತಿಂಗಳ ಹಿಂದೇ 40 ಸಾವಿರ ಡೀಸೆಲ್ ತರಿಸಿ ಸ್ಟಾಕ್ ಮಾಡಲಾಗಿದೆ. ಕೇವಲ ಉದ್ಘಾಟನೆಗಾಗಿ ಕಾಯಲಾಗುತ್ತಿದೆ.
ಆದರೆ ಕಚೇರಿ ಸೆಟ್ ಅಪ್ ಮಾಡಲು ಪೀಠೋಪಕರಣಗಳು, ಜನರೇಟರ್, ಯುಪಿಎಸ್, ಕಂಪ್ಯೂಟರ್, ಏರ್ ಕಂಪ್ರೆಸರ್ ಸೇರಿದಂತೆ ಮತ್ತಿತರ ಅಗತ್ಯ ಸಾಮಗ್ರಿಗಳು ಬರಬೇಕಿದ್ದು ಈಗಾಗಲೇ ಇವುಗಳ ಪೂರೈಕೆಗೆ ಕೇಂದ್ರ ಕಚೇರಿಯಿಂದ ಟೆಂಡರ್ ಕರೆಯಲಾಗಿದೆ.
ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಡಿಪೋ ಆರಂಭವನ್ನು ಮತ್ತೊಷ್ಟು ವಿಳಂಬ ಮಾಡದೇ ಸಾರಿಗೆ ಸಚಿವರ ದಿನಾಂಕ ಪಡೆದು ಯುಗಾದಿ ಹಬ್ಬದ ಉಡುಗೊರೆಯಾಗಿ ಹಿರಿಯೂರು ಡಿಪೋ ಆರಂಭಿಸಲಿ ಎನ್ನುವುದು ಕ್ಷೇತ್ರದ ಜನರ ಬಹು ನಿರೀಕ್ಷೆಯಾಗಿದೆ.
ಪ್ರಯಾಣಿಕರ ಸೌಲಭ್ಯ ಮತ್ತು ಸೌಕರ್ಯಗಳು:
ಡಿಪೋ ಆರಂಭಿಸಿದರೆ ಪ್ರಯಾಣಿಕರಿಗೆ ಉನ್ನತ ಮಟ್ಟದ ಸಾರಿಗೆ ಸೇವಾ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಲಾಗುತ್ತದೆ. ಪ್ರಯಾಣಿಕರ ಅನುಕೂಲ ಮತ್ತು ಅವಶ್ಯಕತೆಗಳನ್ನು ಪೂರೈಸಲು ಸಾಮಾನ್ಯ, ವೇಗಧೂತ, ಅಶ್ವಮೇಧ ಹಾಗೂ ರಾಜಹಂಸ ಸೇರಿದಂತೆ ಹಲವು ಬಸ್ ಗಳ ಕಾರ್ಯಾಚರಣೆ ಮಾಡಲಾಗುತ್ತದೆ. ಅತಿ ಮುಖ್ಯವಾಗಿ ಕರ್ನಾಟಕ ಸಾರಿಗೆ, ಗ್ರಾಮಿಣ ಸಾರಿಗೆ ಹಾಗೂ ನಗರ ಸಾರಿಗೆ ವಾಹನಗಳು ರಸ್ತೆಗೆ ಇಳಿಯುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸಲಾಗುತ್ತದೆ.
ಡಿಪೋ ಹೊರ ರಾಜ್ಯದ ಪ್ರಯಾಣಿಕರ ಅನುಕೂಲಕ್ಕಾಗಿ ಅಂತರ-ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳನಾಡು ಪ್ರಮುಖ ನಗರಗಳಿಗೆ ಹಿರಿಯೂರಿನಿಂದ ಸಾರಿಗೆ ಸೌಲಭ್ಯ ಕಲ್ಪಿಸಬಹುದಾಗಿದೆ.
ಸಿಬ್ಬಂದಿ ಪ್ರಮಾಣ:
ಪ್ರಯಾಣಿಕರಿಗೆ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಒದಗಿಸಲು ಒಟ್ಟು ಚಿತ್ರದುರ್ಗ ವಿಭಾಗದಲ್ಲಿ 1325ಕ್ಕೂ ಹೆಚ್ಚಿನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯೂರು ಡಿಪೋ ಆರಂಭವಾದರೆ ವಿಭಾಗದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಸಿಬ್ಬಂದಿಗಳನ್ನೇ ಹಿರಿಯೂರು ಡಿಪೋಕ್ಕೆ ಅಗತ್ಯ ಇರುವಷ್ಟು ನೌಕರ, ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಿದ್ದಾರೆ.
ಆಗ ಹಿರಿಯೂರು ತಾಲೂಕಿನ ಸುತ್ತ ಮುತ್ತಲ ಸಾರಿಗೆ ನೌಕರರಿಗೆ ಸಾಕಷ್ಟು ಅನುಕೂಲವಾಗಲಿದೆ.
ಮಧ್ಯ ಕರ್ನಾಟಕದ ಮಧ್ಯಭಾಗದ ಹಿಂದುಳಿದ ಹಿರಿಯೂರು ತಾಲೂಕಿನಲ್ಲಿ ಸಾಕಷ್ಟು ಖಾಸಗಿ ಬಸ್ ನವರ ಪೈಪೋಟಿಯೊಂದಿಗೆ ಸ್ಪರ್ಧಾತ್ಮಕವಾಗಿ ಮತ್ತು ವಿಶೇಷವಾಗಿ ಗ್ರಾಮೀಣ ಭಾಗಕ್ಕೆ ಸಾರಿಗೆ ಸೌಕರ್ಯವನ್ನು ಒದಗಿಸುವ ಹೆಗ್ಗಳಿಕೆ ಹೊಂದುವ ಅವಕಾಶ ಇದೆ.
ನೂತನ ಘಟಕದ ವೈಶಿಷ್ಟತೆಗಳು:
ಆಡಳಿತ ಕಛೇರಿ, ಬಸ್ಸುಗಳ ನಿರ್ವಹಣಾ/ ಪರಿವೀಕ್ಷಣಾ ಅಂಕಣ, ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ, ಭದ್ರತಾ ಮತ್ತು ಸಂಚಾರ ಶಾಖೆ, ಸಾರಿಗೆ ಸಂಸ್ಥೆಯ ಮಹಿಳಾ ಸಿಬ್ಬಂದಿ ವಿಶ್ರಾಂತಿ ಗೃಹ, ಪುರುಷ ವಿಶ್ರಾಂತಿ ಗೃಹಗಳಿವೆ.
ಬಸ್ ನಿಲ್ದಾಣದ ವೈಶಿಷ್ಟತೆಗಳು:
ಹಿರಿಯೂರು ಸಾರಿಗೆ ಡಿಪೋ ಆರಂಭವಾಗುವುದರಿಂದ ಬಸ್ ನಿಲ್ದಾಣದಲ್ಲೂ ಒಂದಿಷ್ಟು ಸೇವಾ ಸೌಲಭ್ಯಗಳು ದೊರೆಯಲಿವೆ. ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ, ಉಪಹಾರ ಗೃಹ, ವಿದ್ಯುತ್ ಬೆಳಕಿನ ವ್ಯವಸ್ಥೆ, ಪ್ರಯಾಣಿಕರು ಬಸ್ಸುಗಳಿಗೆ ಕಾಯುವ ಸ್ಥಳ, ವಾಣಿಜ್ಯ ಸಮುಚ್ಛಯ, ಪಾಸ್ ಕೌಂಟರ್ ಸೇರಿದಂತೆ ಇತ್ಯಾದಿಗಳ ಸೇವೆ ನೀಡಲು ಅವಕಾಶ ಆಗಲಿದೆ.
ಹೊಸ ಮಾರ್ಗಗಳು:
ಹೊಸ ಡಿಪೋ ಆರಂಭವಾಗುವುದರಿಂದ ಹಿರಿಯೂರು ಡಿಪೋಕ್ಕೆ ಹೊಸದಾಗಿ 30 ರಿಂದ 50 ಬಸ್ ಗಳನ್ನು ನೀಡುವ ಸಾಧ್ಯತೆ ಇದೆ. ಹಾಲಿ ಇರುವ ಮಾರ್ಗಗಳ ಜೊತೆಯಲ್ಲಿ ಹೊಸದಾಗಿ ಹಲವು ಮಾರ್ಗಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸಾರಿಗೆ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ.
ಹಿರಿಯೂರು-ಬೆಂಗಳೂರು ತಡೆ ರಹಿತ ಅಶ್ವಮೇಧ ಬಸ್, ಹಿರಿಯೂರು-ಹೊಸದುರ್ಗ-ಕಡೂರು-ಚಿಕ್ಕಮಗಳೂರು-ಧರ್ಮಸ್ಥಳ, ಹಿರಿಯೂರು-ಹೊಸದುರ್ಗ-ತರೀಕೆರೆ, ಹಿರಿಯೂರು-ಧರ್ಮಪುರ-ಪಾವಗಡ, ಹಿರಿಯೂರು-ಮೈಸೂರು, ಹಿರಿಯೂರು-ಹಿಂಧೂಪುರ, ಹಿರಿಯೂರು-ಕರೂರು, ಹಿರಿಯೂರು-ಮಂತ್ರಾಲಯ, ಹಿರಿಯೂರು-ಶ್ರೀಶೈಲ, ಹಿರಿಯೂರು-ಹೈದರಾಬಾದ್, ಹಿರಿಯೂರು-ರಾಯದುರ್ಗ-ಬಳ್ಳಾರಿ, ಹಿರಿಯೂರು-ಊಟಿ, ಹಿರಿಯೂರು-ಹುಳಿಯಾರ್-ಅರಸೀಕೆರೆ-ಹಾಸನ, ಹಿರಿಯೂರು-ಮಡಿಕೇರಿ-ಕೊಡಗು, ಹಿರಿಯೂರು-ಶಿರಾ-ತುಮಕೂರು, ಹಿರಿಯೂರು-ತಿಪಟೂರು, ಹಿರಿಯೂರು-ಶಿರಾ-ನಿಟ್ಟೂರು ಮಾರ್ಗದಲ್ಲಿ ಮೈಸೂರು, ಹಿರಿಯೂರು-ಬ್ಯಾಡರಹಳ್ಳಿ-ಹರಿಯಬ್ಬೆ-ಧರ್ಮಪುರ-ಪರಶುರಾಂಪುರ-ಚಳ್ಳಕೆರೆ, ಹಿರಿಯೂರು-ಶಿರಾ-ಮಧುಗಿರಿ, ಹಿರಿಯೂರು-ತಿರುಪತಿ ಹೀಗೆ ಹತ್ತು ಹಲವು ಹೊಸ ಮಾರ್ಗಗಳಲ್ಲಿ ಬಸ್ ಗಳನ್ನು ಓಡಿಸಿ ಹಿರಿಯೂರು ಡಿಪೋ ಆರ್ಥಿಕವಾಗಿ ಹೆಚ್ಚಿನ ಶಕ್ತಿ ಹೊಂದುವ ಸಾಧ್ಯತೆ ದಟ್ಟವಾಗಿದೆ.
“ಹಿರಿಯೂರು ಡಿಪೋ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡು 6 ತಿಂಗಳಾಗಿದೆ. ಈಗಾಗಲೇ ಡೀಸೆಲ್ ವ್ಯವಸ್ಥೆ ಮಾಡಿಕೊಂಡಿದ್ದ 40 ಸಾವಿರ ಲೀಟರ್ ಸ್ಟಾಕ್ ಇದೆ. ಆದರೆ ಪೀಠೋಪಕರಣಗಳು, ಜನರೇಟರ್, ಯುಪಿಎಸ್, ಕಂಪ್ಯೂಟರ್, ಏರ್ ಕಂಪ್ರೆಸರ್ ಸೇರಿದಂತೆ ಇತರೆ ಮೂಲ ಸಾಮಗ್ರಿಗಳು ಬರಬೇಕಿದೆ.”ಕೆ.ಹೆಚ್.ಶ್ರೀನಿವಾಸ್, ಎಇಇ, ಕೆಎಸ್ಆರ್ ಟಿಸಿ ಚಿತ್ರದುರ್ಗ ವಿಭಾಗ.
“ಹಿರಿಯೂರು ಡಿಪೋ ಆರಂಭಿಸಲು ಯಾವುದೇ ಸಮಸ್ಯೆ ಇಲ್ಲ. ಡಿಪೋ ಬಹುತೇಕ ರೆಡಿಯಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ದಿನಾಂಕ ಕೇಳಿದ್ದೇನೆ. ಈ ತಿಂಗಳಲ್ಲೇ ಅವರು ಬರುವ ನಿರೀಕ್ಷೆ ಇದ್ದು ಯುಗಾದಿ ಹಬ್ಬದ ಉಡುಗೊರೆಯಾಗಿ ಡಿಪೋ ಆರಂಭ ಶತಸಿದ್ಧ, ಯಾವುದೇ ಅನುಮಾನ ಬೇಡ”.
ಡಿ.ಸುಧಾಕರ್, ಹಿರಿಯೂರು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು.
“ಎರಡು ಮೂರು ದಿನಗಳಿಂದೆ ಹೊಸದಾಗಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಆಗಮಿಸಿದ್ದೇನೆ. ಹೊಸ ಡಿಪೋಗಳ ಆರಂಭದ ಪ್ರಸ್ತುತ ಮಾಹಿತಿ ನನಗೆ ಗೊತ್ತಿಲ್ಲ”. ವೆಂಕಟೇಶ್, ವಿಭಾಗೀಯ ನಿಯಂತ್ರಣಾಧಿಕಾರಿ, ಚಿತ್ರದುರ್ಗ ಸಾರಿಗೆ ವಿಭಾಗ.