ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿವೇಶನ ಮತ್ತು ಮನೆ ಹಂಚಿಕೆ ಸಂದರ್ಭದಲ್ಲಿ ಪತ್ರಕರ್ತರಿಗೆ ಮೀಸಲು ನೀಡುವ ನಿಟ್ಟಿನಲ್ಲಿ ಕೂಡಲೇ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಮಂಡಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು, ಬಿಡಿಎ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಮನೆ ಹಂಚಿಕೆ ಸಂದರ್ಭದಲ್ಲಿ ಪತ್ರಕರ್ತರಿಗೆ ಶೇ.5ರಷ್ಟು ಮೀಸಲು ನೀಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದರು.
ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆಗೆ ಈ ಬಗ್ಗೆ ಸಮಾಲೋಚನೆ ನಡೆಸಿದ ಡಿಸಿಎಂ, ಕಾನೂನು ತೊಡಕುಗಳು ಏನೇನು ಇದೆ? ಯಾವ ರೀತಿಯಲ್ಲಿ ಪತ್ರಕರ್ತರಿಗೆ ಸಹಾಯ ಮಾಡಬಹುದು ಎಂದು ಚರ್ಚೆ ನಡೆಸಿದರು.
ಶೇ.5 ರಿಯಾಯಿತಿ ಕೊಡುವುದು ಕಷ್ಟವಾಗಬಹುದು. ಆದರೆ, ಕನಿಷ್ಠ ಶೇ.1 ರಿಂದ ಶೇ.2ರಷ್ಟು ರಿಯಾಯಿತಿ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಬಗ್ಗೆ ಶೀಘ್ರವೇ ಆದೇಶವನ್ನು ಹೊರಡಿಸಲು ಅಗತ್ಯವಿರುವ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.
ಅಪರ ಮುಖ್ಯಕಾರ್ಯದರ್ಶಿ ಮತ್ತು ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್, ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್, ಡಿಸಿಎಂ ವಿಶೇಷಾಧಿಕಾರಿ ರಾಜೇಂದ್ರಪ್ರಸಾದ್ ಮತ್ತಿತರರು ಇದ್ದರು.