ಮನುಷ್ಯರಾಗಿ ಹುಟ್ಟಿ ದೈವತ್ವಕ್ಕೆ ಏರಿದವರು ಶ್ರೀಯೋಗಿ ನಾರೇಯಣ ಯತೀಂದ್ರರು-ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಮಾನ್ಯ ಮನುಷ್ಯರಾಗಿ ಹುಟ್ಟಿ, ದೈವತ್ವಕ್ಕೆ ಏರಿದ ಮಹಾನ್ ಪುರುಷ ಶ್ರೀ ಯೋಗಿ ನಾರೇಯಣ ಯಂತೀದ್ರರು, ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಶುಕ್ರವಾರ ನಗರದ .ರಾ.ಸು ರಂಗಮಂದಿರದಲ್ಲಿ ಆಯೋಜಿಸಲಾದ ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಮನುಷ್ಯನಾಗಿ ಹುಟ್ಟಿ ದೇವಮಾನವರಾದ ಪ್ರಸಂಗ ಬಹಳ ವಿರಳವಾದುದ್ದು. 1726 ರಲ್ಲಿ ಮುದ್ದಮ್ಮ ಹಾಗೂ ಕೊಂಡಪ್ಪ ದಂಪತಿಗಳ ಮಗನಾಗಿ, ಹಿಂದಿನ ಕೋಲಾರ ಜಿಲ್ಲೆಯ ಕೈವಾರದಲ್ಲಿ ಯೋಗಿ ನಾರೇಯಣರು ಜನ್ಮಿಸುತ್ತಾರೆ. ಇವರು ಮೂಲ ಹೆಸರು ನಾರಾಯಣಪ್ಪ, ಬಲಿಜ ಸಮುದಾಯಕ್ಕೆ ಸೇರಿದ ಇವರು, ಕುಲ ಕಸುಬು ಬಳೆ ಮಾರುವ ವೃತ್ತಿ ಮಾಡುತ್ತಿದ್ದರು. ವ್ಯಾಪಾರದಲ್ಲಿ ದೇವರನ್ನು ಕಂಡು ಲೌಕಿಕ ಜಗತ್ತಿನಿಂದ ಅಲೌಕಿಕದೆಡೆಗೆ ನಾರಾಯಣಪ್ಪ ಸಾಗುತ್ತಾರೆ. ಬದುಕಿನ ಉದ್ದಕ್ಕೂ ಅನೇಕ ಪವಾಡಗಳನ್ನು ಮಾಡಿದ ಯೋಗಿ ನಾರೇಯಣರು ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿದರು. ದಿವ್ಯ ಜ್ಞಾನದಿಂದ ಕಾಲಜ್ಞಾನ ರಚಿಸಿದರು. ಬಲಿಜ ಜನಾಂಗ ಸಂಖ್ಯೆಯಲ್ಲಿ ಕಡಿಮೆ ಇದ್ದರೂ, ಅತ್ಯಂತ ಸ್ವಾಭಿಮಾನಿ ಸಮಾಜವಾಗಿದೆ. ವ್ಯಾಪಾರ ಹಾಗೂ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ರಾಜಕೀಯವಾಗಿಯೂ ಜಾಗೃತರಾಗಿದ್ದಾರೆ. ಆದರೂ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಇನ್ನೂ ಹೆಚ್ಚಿನ ಸ್ಥಾನಮಾನ ಗಳಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ ನೀಡಿದರು.

ಇಂದು ನಾಡಿನ ಸಂಸ್ಕøತಿ ಅಳಿದು ಹೋಗುವ ಅಂಚಿನಲ್ಲಿದೆ. ಇದನ್ನು ಮತ್ತೆ ಕಟ್ಟಿಕೊಡಬೇಕಾದ ಸಾಮಾಜಿಕ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಸಾಹಿತಿ ಹುರುಳಿ ಬಸವರಾಜ್ ಉಪನ್ಯಾಸ ನೀಡಿ, ಶ್ರೀ ಯೋಗಿ ನಾರೇಯಣ ಯತೀಂದ್ರರು ರಚಿಸಿದ ಕಾಲಜ್ಞಾನ ಆಧುನಿಕ ಯುಗದಲ್ಲಿ ಸಾಮಾಜಿಕ ಅವ್ಯವಸ್ಥೆ, ಭವಿಷ್ಯದಲ್ಲಿನ ಪ್ರಳಯದ ಮುನ್ಸೂಚನೆಗಳನ್ನು ನೀಡಿದೆ. ಎಲ್ಲ ಆಧುನಿಕ ಸವಲತ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಮನುಷ್ಯನ ಬದುಕು ಅಧಃಪತನಕ್ಕೆ ಜಾರಿದೆ. ಸಂಬಂಧಗಳು ಸಡಿಲವಾಗುತ್ತಿವೆ. ಸಂಕೋಚ ಬದುಕುತ್ತಿರುವ, ಮುನ್ನಡೆಯೇ ಕಾಣದೇ ಆತ್ಮಹತ್ಯೆ ಅಂತಹ ಪ್ರಯತ್ನಗಳಿಗೆ ಯುವ ಜನರು ತುತ್ತಾಗುತ್ತಿದ್ದಾರೆ. ಎಲ್ಲಾ ಅಂಶಗಳು ಸಹ ನಾರೇಯಣ ರಚಿಸಿದ ಕಾಲಜ್ಞಾನದಲ್ಲಿ ಅಡಗಿವೆ. ಇವುಗಳನ್ನು ತಿಳಿದುಕೊಳ್ಳುವ ಮೂಲಕ, ತಪ್ಪುಗಳನ್ನು ಸರಿಪಡಿಸಿಕೊಂಡು ಜೀವನವನ್ನು ನಡೆಸಿದರೆ, ಸಮಾಜ ಉನ್ನತಿ ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟರು.

ಕೈವಾರ, ತುಂಬಾ ಐತಿಹ್ಯಗಳು ಇರುವ ಸ್ಥಳವಾಗಿದೆ. ರಾಮಾಯಣ, ಮಹಾಭಾರತ ನಂಟು ಕೈವಾರ ಪಟ್ಟಣಕ್ಕಿದೆ. ಮಹಿಷಾಸುರನನ್ನು ಕೊಂದು ದೇವಿ ತನ್ನ ಉಗ್ರರೂಪವನ್ನು ತೊರೆದು ಶಾಂತವಾದ ಸ್ಥಳ ಕೈವಾರ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇಂತಹ ಸ್ಥಳದಲ್ಲಿ ಜನಿಸಿದ ನಾರಾಯಣಪ್ಪ ಮುಂದೆ ಶ್ರೀಯೋಗಿನಾರೇಯಣ ಯತೀಂದ್ರರಾಗಿ ಕೈವಾರವನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡರು ಎಂದು ಹೇಳಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ : ಜಯಂತಿ ಅಂಗವಾಗಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದ ಬಲಿಜ ಸಮುದಾಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಗುರುನಾಥ್ ಸ್ವಾಗತಿಸಿದರು. ವಿಕಲಚೇತನ ಪ್ರತಿಭೆ ರಕ್ಷಾ ಕುರುಬರಹಳ್ಳಿ ಪ್ರಾರ್ಥಿಸಿದರು. ಗಾಯಕ ಮುತ್ತುರಾಜ ಅವರ ತಂಡ ನಾಡಗೀತೆ ಪ್ರಸ್ತುತ ಪಡಿಸುವುದರೊಂದಿಗೆ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನವೀನ್ ಮಸ್ಕಲ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ನಗರಸಭೆ ಆಯುಕ್ತೆ ಎಂ.ರೇಣುಕಾ, ಜಿಲ್ಲಾ ಶ್ರೀ ಯೋಗಿ ನಾರೇಯಣ ಯಂತೀದ್ರ ಬಲಿಜ ಸಂಘದ ಅಧ್ಯಕ್ಷ ಎಂ..ಸೇತುರಾಮ್, ಕಾರ್ಯದರ್ಶಿ ಎಂ.ಗಂಗಣ್ಣ, ತಾಲ್ಲೂಕು ಸಂಘದ ಅಧ್ಯಕ್ಷ ಎಂ.ಜಿ.ಸೂರ್ಯನಾರಾಯಣ, ಶ್ರೀ ಯೋಗಿನಾರೇಯಣ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಎಂ.ಕೆ.ಪ್ರಹ್ಲಾದ್, ಬೋಮೇನಹಳ್ಳಿ ಶ್ರೀ ಯೋಗಿನಾರೇಯಣ ಯತೀಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ವಿ.ರಾಮದಾಸಪ್ಪ, ಬೋಮೇನಹಳ್ಳಿ ಶ್ರೀ ಯೋಗಿನಾರೇಯಣ ಯತೀಂದ್ರ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ಸೇರಿದಂತೆ ಬಲಿಜ ಸಮಾಜದ ಮುಖಂಡರು ಉಪಸ್ಥಿತದ್ದರು.

ಅದ್ದೂರಿ ಮೆರವಣಿಗೆ :
ಕೈವಾರ ತಾತಯ್ಯ ಜಯಂತಿ ಅಂಗವಾಗಿ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇವಸ್ಥಾನ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅದ್ದೂರಿ ಮೆರವಣಿಗೆ ಚಾಲನೆ ನೀಡಿದರು.
ಶ್ರೀ ಯೋಗಿನಾರೇಯಣ ಯತೀಂದ್ರ, ಬಲಿಚಕ್ರವರ್ತಿ, ಶ್ರೀಕೃಷ್ಣದೇವರಾಯ, ಜ್ಯೋತಿಬಾಪುಲೆ, ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಗಳನ್ನು ಮೆರವಣಿಗೆಯಲ್ಲಿದ್ದವು. ಸಾಂಸ್ಕøತಿಕ ಕಲಾ ತಂಡಗಳು, ಬಲಿಜ ಮಹಿಳಾ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು. ಮೆರವಣಿಗೆ ಗಾಂಧಿ ವೃತ್ತ, ಎಸ್.ಬಿ., ಅಂಬೇಡ್ಕರ್ ವೃತ್ತದ ಮೂಲಕ ತರಾಸು ರಂಗಮಂದಿರ ತಲುಪಿತು.

- Advertisement -  - Advertisement - 
Share This Article
error: Content is protected !!
";