ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ದಾಖಲಾಗಿರುವ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿ ಆಧಾರದಲ್ಲಿ ಪರಿಗಣಿಸಿದ್ದ ಸಂಜ್ಞೇ (ಕಾಗ್ನಿಜೆನ್ಸ್)ಗೆ ತಡೆ ನೀಡಿರುವ ಹೈಕೋರ್ಟ್, ಖುದ್ದು ಹಾಜರಿಗೆ ವಿನಾಯಿತಿ ನೀಡಿ ಆದೇಶಿಸಿದೆ.
ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ವಿರುದ್ಧದ ಆರೋಪ ಸಂಬಂಧ ಪರಿಗಣಿಸಿರುವ ಸಂಜ್ಞೆ ಮತ್ತು ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಸೇರಿದಂತೆ ವೈ.ಎಂ.ಅರುಣ, ರುದ್ರೇಶ್ ಮರಳುಸಿದ್ದಯ್ಯ ಮತ್ತು ಜಿ.ಮರಿಸ್ವಾಮಿ ಎಂಬವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ ಅವರಿದ್ದ ನ್ಯಾಯಪೀಠ ಖುದ್ದು ಹಾಜರಿಗೆ ವಿನಾಯಿತಿ ನೀಡಿ ಆದೇಶ ನೀಡಿತು.
ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣ ಸಂಬಂಧ ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಯಡಿಯೂರಪ್ಪ ಮತ್ತು ಇತರರ ವಿರುದ್ಧದ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಇರುವ ಪೋಕ್ಸೋ ಪ್ರಕರಣಕ್ಕೆ ತಡೆ ವಿಧಿಸಲಾಗಿದೆ. ಎಲ್ಲಾ ಅರ್ಜಿದಾರರಿಗೂ ವಿಚಾರಣಾಧೀನ ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಯಿಂದ ಮುಂದಿನ ವಿಚಾರಣೆವರೆಗೆ ವಿನಾಯಿತಿ ನೀಡಲಾಗಿದೆ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ವಕೀಲರು ವಿಚಾರಣೆ ವೇಳೆ ಒಂದು ತಿಂಗಳ 12 ದಿನದ ನಂತರ ಸಂತ್ರಸ್ತೆ ಮತ್ತು ದೂರುದಾರೆ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆ ಮತ್ತು ದೂರುದಾರರ ಹೇಳಿಕೆ ಸತ್ಯದಿಂದ ಕೂಡಿಲ್ಲ. ಈ ಸಂಬಂಧ ಹಿಂದಿನ ದಾವೆಯ ಸಂದರ್ಭದಲ್ಲಿ ಸಮನ್ವಯ ಪೀಠವು ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಿತ್ತು. ಈಗಲೂ ಸಂಜ್ಞೇ ಪರಿಗಣಿಸುವಾಗ ಲೋಪವಾಗಿದೆ. ಐಪಿಸಿ ಸೆಕ್ಷನ್ 204 ಮತ್ತು 214 ಅಡಿ ಯಾವುದೇ ಆಧಾರವಿಲ್ಲದಿದ್ದರೂ ಸಂಜ್ಞೇ ಪರಿಗಣಿಸಲಾಗಿದೆ. ಅಲ್ಲದೇ, ವಿಶೇಷ ನ್ಯಾಯಾಲಯವು ನಾಳೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಹೀಗಾಗಿ, ಈ ಅರ್ಜಿ ಇತ್ಯರ್ಥವಾಗುವವರೆಗೆ ತಡೆ ನೀಡಬೇಕು ಎಂದು ಕೋರಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಹಿಂದೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರನೆಯಲ್ಲಿ ಯಡಿಯೂರಪ್ಪ ಮತ್ತು ಇತರರ ಪ್ರಕರಣದಲ್ಲಿ ತಡೆಯಾಜ್ಞೆ ನೀಡಿರಲಿಲ್ಲ. ಮಧ್ಯಂತರ ವ್ಯವಸ್ಥೆ ಮಾಡಲಾಗಿತ್ತು ಅಷ್ಟೇ. ಇದು ಮಧ್ಯಂತರ ಪರಿಹಾರ ನೀಡುವ ಪ್ರಕರಣವಲ್ಲ. ಪ್ರಕರಣ ಮುಂದುವರಿಸಲು ಸಾಕಷ್ಟು ದಾಖಲೆಗಳು ನ್ಯಾಯಾಲಯದ ಮುಂದೆ ಇವೆ. ಮಧ್ಯಂತರ ತಡೆ ನೀಡಿದರೆ ಪ್ರಾಸಿಕ್ಯೂಷನ್‌ಗೆ ಸಮಸ್ಯೆ ಉಂಟಾಗಲಿದೆ. ಇದೆಲ್ಲವನ್ನೂ ಪರಿಗಣಿಸಿ ಮತ್ತೊಂದು ಪೀಠವು ಮತ್ತೆ ಸಂಜ್ಞೇ ಪರಿಗಣಿಸಲು ಆದೇಶಿಸಿತ್ತು. ಎಫ್‌ಐಆರ್, ಆರೋಪಪಟ್ಟಿ ಸಲ್ಲಿಕೆಯನ್ನು ಹಾಗೇ ಉಳಿಸಿತ್ತು ಎಂದು ತಿಳಿಸಿದರು.