ಹಾಲಿನಿಂದ ಆಲ್ಕೋಹಾಲಿನತ್ತಾ ಬದಲಾವಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಾಲಿನಿಂದ ಆಲ್ಕೋಹಾಲಿನತ್ತಾ ಬದಲಾವಣೆ……..ಕೃಷಿ ಭೂಮಿಯನ್ನೂ ಬಿಡದೆ 30/40 ಸೈಟ್ ಗಳಾಗಿ ಸ್ಕೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 75000 ರೂಪಾಯಿಗೂ ಹೆಚ್ಚು ಇದೆಯಂತೆ.
500/510/520/530 ರೂಪಾಯಿಗಳ ದರದಲ್ಲಿ ಒಂದು ಗ್ರಾಂಗೆ ಒಂದು ವರ್ಷದ ಅವಧಿಯಲ್ಲಿ ಏರಿಕೆಯಾಗುತ್ತಿತ್ತು ಹಳದಿ ಲೋಹ ಚಿನ್ನ. ಆದರೆ ಈಗ ಕೆಲವೇ ವರ್ಷಗಳಲ್ಲಿ 8000 ರೂಪಾಯಿ ತಲುಪಿದೆ.

ಸಣ್ಣ ಕಟ್ಟಡಗಳ, ವಿಶಾಲ ಮೈದಾನದಲ್ಲಿ ಹಸಿರು ಗಿಡಗಳ ನಡುವೆ ಸರಳವಾಗಿ ನಡೆಯುತ್ತಿದ್ದ ಶಾಲೆಗಳು ಖಾಸಗಿ ಜನರ ಕೈಸೇರಿ ಅದ್ದೂರಿ ಕಾಂಕ್ರೀಟ್ ಕಟ್ಟಡಗಳಾಗಿ ಕೇವಲ ಒಂದನೇ ತರಗತಿಗೆ ಒಂದು ವರ್ಷಕ್ಕೆ ಲಕ್ಷ ರೂಪಾಯಿಗಳನ್ನು ಮೀರಿದ ಹಣ ಪಾವತಿ ಮಾಡಬೇಕಿದೆ.

ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಐಷಾರಾಮಿ ಹೋಟೆಲುಗಳನ್ನು ಮೀರಿಸುವ ಭವ್ಯತೆ ಪಡೆದು ಕೆಮ್ಮು ಜ್ವರಕ್ಕೂ ಸಾವಿರಾರು ರೂಪಾಯಿ ತೆರುವಂತಾಗಿದೆ. ಸಾಮಾನ್ಯ ಜನರು ಕನಸಿನಲ್ಲೂ ಯೋಚಿಸದ ಐಷಾರಾಮಿ ಕಾರುಗಳು ಸಾಮಾನ್ಯರ ಕಾಲ ಕೆಳಗೆ ಸೇರಿ ಅವರನ್ನು ಹೊತ್ತು ತಿರುಗುತ್ತಿವೆ.

ಪಿಎಚ್ ಡಿ ಮಾಡಿರುವವರೂ ಕೂಡ ಪಡೆಯದ ಲಕ್ಷ ರೂಪಾಯಿ ಸಂಬಳ ಕೇವಲ ಪಿಯುಸಿ ಮತ್ತು ಕಂಪ್ಯೂಟರ್ ಡಿಪ್ಲೊಮಾ ಮಾಡಿದ 20 ವಯಸ್ಸಿನ ಹುಡುಗ ಹುಡುಗಿಯರು ಎಣಿಸತೊಡಗಿದ್ದಾರೆ. ಫೇಶೀಯಲ್ ಮಸಾಜ್, ಲಿಪ್ ಸ್ಟಿಕ್, ಡ್ಯಾನ್ಸ್ ಕ್ಲಬ್, ಫ್ಯಾಷನ್ ಡಿಸೈನಿಂಗ್ ಗಳು, ಶಾಪಿಂಗ್ ಮಾಲ್ ಗಳು ಒಂದು ಕಡೆ.

ಮಾಸ್ಟರ್ ಬೆಡ್ ರೂಂ, ಚಿಲ್ಡ್ರನ್ಸ್ ಬೆಡ್ ರೂಂ, ಸರ್ವೆಂಟ್ ಬೆಡ್ ರೂಂ, ಗೆಸ್ಟ್ ಬೆಡ್ ರೂಂ ಗಳೆಂಬ ಐಷಾರಾಮಿ ಇನ್ನೊಂದು ಕಡೆ. ಪ್ರಕೃತಿಯ ಸಂಪನ್ಮೂಲಗಳು ಯಾರಪ್ಪನದು.

ತಿನ್ನುವ, ಅಪಾರ ಪೌಷ್ಠಿಕಾಂಶದ ಹಣ್ಣು ತರಕಾರಿ ಎಳನೀರುಗಳು ಬೀದಿ ಬದಿಯ ಬಿಸಿಲಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಿಕರಿಯಾಗತೊಡಗಿದವು, ಅದನ್ನು ಬೆಳೆಯುವವರು ಬದುಕಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಪೆಪ್ಸಿ ಕೋಲಾ ವಿಸ್ಕಿ ಸಿಗರೇಟ್ ಎಂಬ ಸಾವಿನ ವಿಷಗಳನ್ನು  ರಾಜಾರೋಷವಾಗಿ ಎಸಿ ರೂಮುಗಳಲ್ಲಿ ಅಪಾರ ಬೆಲೆ ಕೊಟ್ಟು ‌ಸೇವಿಸುವುದೇ ಒಂದು ಪ್ರತಿಷ್ಠೆಯಾಯಿತು. ಅದನ್ನು ‌ಸೃಷ್ಟಿಸುವವರು ಅತ್ಯಂತ ಶ್ರೀಮಂತರಾಗಿ ಬದುಕನ್ನು ಮಜಾ ಉಡಾಯಿಸುತ್ತಿದ್ದಾರೆ.

ತಲೆ ಒಡೆದು-ತಲೆ ಹಿಡಿದು ಕೊಂದು – ವಂಚಿಸಿ ಹಣ ಮಾಡಿ ಅದನ್ನು ಪ್ರದರ್ಶನ ಮಾಡುವುದೇ ಬದುಕಿನ ಧ್ಯೇಯವಾಯಿತು. ಶಿಕ್ಷಕ ವೃತ್ತಿ ಕಾಲ ಕಸವಾಯಿತು, ಬ್ರೋಕರ್ ಗಿರಿ ಪವಿತ್ರ ವೃತ್ತಿಯಾಯಿತು. ಸಮಾಜ ಸೇವೆ ರಾಜಕೀಯವಾಯಿತು, ರಾಜಕೀಯ ದಂಧೆಯಾಯಿತು. ಹಣ ಅಧಿಕಾರ ಜಾತಿ ಧರ್ಮ ಸಾಮಾಜಿಕ ಮೌಲ್ಯಗಳಾದವು. ಪ್ರೀತಿ ಸ್ನೇಹ ವಿಶ್ವಾಸ ಕರುಣೆ ಸಹಕಾರ ನೆಲ ಇಲ್ಲದೆ ವಿನಾಶದ ಅಂಚಿಗೆ ತಲುಪಿದವು. ಸೇವಿಸುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ವಿಷವಾದವು.

ಇಟಾಲಿಯನ್ ಮಾರ್ಬಲ್, ಅಮೆರಿಕನ್ ಟೈಲ್ಸ್, ಮಲೇಷಿಯನ್ ವುಡ್, ಜರ್ಮನಿ ಕಮೋಡ್ ಗಳಿಂದ ನೆಲ ಗೋಡೆ ಕಿಚನ್ ಒಳಾಂಗಣ ಹೊರಾಂಗಣಗಳು ಫಳಫಳ ಹೊಳೆಯಲು ತೊಡಗಿದವು. ಮನಸ್ಸುಗಳ ಚಿಕ್ಕದಾದವು, ಮನೆಗಳು ದೊಡ್ಡದಾದವು, ವಸ್ತುಗಳು ಹತ್ತಿರವಾದವು, ಸಂಬಂಧಗಳು ದೂರವಾದವು.

ಕ್ಷಮಿಸಿ, ಆಧುನಿಕತೆ ಸೃಷ್ಟಿಸಿದ ಮಾನಸಿಕ ತಲ್ಲಣಗಳು ಏಕಾಂತದಲ್ಲಿ ನೆನಪಿನ ಅಲೆ ಅಲೆಯಾಗಿ ಅಪ್ಪಳಿಸಿದಾಗ ಮೂಡಿದ ಭಾವನೆಗಳಿವು.
ಲೇಖನ-ವಿವೇಕಾನಂದ. ಎಚ್. ಕೆ. 9844013068.

 

- Advertisement -  - Advertisement - 
Share This Article
error: Content is protected !!
";