ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಮಧುರೆ ಹೋಬಳಿ ಕನಸವಾಡಿ (ಚಿಕ್ಕ ಮಧುರೆ) ಯಲ್ಲಿ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾಗಿದ್ದು, ಕನ್ನಡದ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲ ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ತಿಳಿಸಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ಶನಿವಾರ ಸಂಜೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನಲೆ ಸಂಘ-ಸಂಸ್ಥೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಪ್ರಿಲ್12 ಮತ್ತು 13 ರಂದು ಸಮ್ಮೇಳನ ನಡೆಯಲಿದ್ದು, ವಿಚಾರಗೋಷ್ಠಿ, ಕವಿಗೋಷ್ಠಿ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಪ್ರಾತಿನಿಧ್ಯ ನೀಡಲಾಗುವುದು. ಜಿಲ್ಲೆ ಹಾಗೂ ತಾಲೂಕಿನ ಜ್ವಲಂತ ಸಮಸ್ಯೆಗಳು, ಕೃಷಿಕರು, ನೇಕಾರರ ಸಂಕಷ್ಟಗಳು, ಕೈಗಾರಿಕೀಕರಣ ದಿಂದ ಎದುರಾಗಿರುವ ಸವಾಲುಗಳ ಕುರಿತು ಚರ್ಚಿಸುವ ಗೋಷ್ಠಿಗಳನ್ನು ಏರ್ಪಡಿಸಲಾಗುವುದು. ಸಮ್ಮೇಳನ ಆಯೋಜನಾ ತಾಲೂಕಿನ ಸ್ಥಳೀಯ ಸಾಧಕ ರೊಬ್ಬರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು. ಸಮ್ಮೇಳನದ ಸಮಗ್ರ ಆಯೋಜನೆ, ಕಾರ್ಯನಿರ್ವಹಣೆಗೆ ಎಲ್ಲ ಕನ್ನಡಪರ, ಪ್ರಗತಿಪರ, ರೈತ, ದಲಿತ, ಮಹಿಳಾ ಹಾಗೂ ವಿದ್ಯಾರ್ಥಿ ಸಂಘಟನೆಗಳು ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಸಲಹೆ-ಸೂಚನೆಗಳನ್ನು ನೀಡಿ ಮಾತನಾಡಿದ ಸಂಘಟನೆಗಳ ಮುಖಂಡರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಚಾರ. ಸಮ್ಮೇಳನ ಕೇವಲ ಸಾಹಿತ್ಯಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ಈ ನೆಲದ ಸಮಸ್ಯೆಗಳಿಗೆ ದನಿಯಾಗ ಬೇಕು. ರೈತರ ಹೋರಾಟಗಳು, ನೇಕಾರರ ಸಂಕಷ್ಟ, ಕೈಗಾರಿಕೆಗಳ ಅತಿಯಾದ ಬೆಳವಣಿಗೆಯಿಂದ ಉಂಟಾಗುತ್ತಿರುವ ಸಮಸ್ಯೆಗಳು ಸೇರಿದಂತೆ ಜ್ವಲಂತ ಸಮಸ್ಯೆಗಳ ಚರ್ಚೆಗೆ ವೇದಿಕೆ ಯಾಗಬೇಕು. ಕೇವಲ ಚರ್ಚೆಗಷ್ಟೇ ಸೀಮಿತವಾಗದೆ ಸರ್ಕಾರದ ಮೇಲೆ ಪ್ರಭಾವ ಬೀರುವ ಪ್ರಯತ್ನವಾಗಬೇಕು ಎಂದರು.
ಸಮ್ಮೇಳನಾಧ್ಯಕ್ಷತೆಗೆ ಸ್ಥಳೀಯ ಸಾಧಕರನ್ನು ಗುರ್ತಿಸಿ ಆಯ್ಕೆ ಮಾಡಬೇಕು. ಹೋರಾಟಗಾರರು, ಇತರೆ ಕ್ಷೇತ್ರಗಳಲ್ಲಿನ ಸಾಧಕರನ್ನೂ ಪರಿಗಣಿಸುವುದು ಅಗತ್ಯ. ಸಂಘ-ಸಂಸ್ಥೆಗಳಿಗೆ ನಿರ್ದಿಷ್ಟ ಹೊಣೆಗಾರಿಕೆಯನ್ನು ವಹಿಸಿ, ತೊಡಗಿಸಿಕೊಳ್ಳುವ ಪ್ರಯತ್ನ ಆಗಬೇಕು. ಒಟ್ಟಾರೆಯಾಗಿ ತಾಲೂಕಿನಲ್ಲಿ ನಡೆವ ಸಮ್ಮೇಳನ ಮಾದರಿಯಾಗಿ ರೂಪುಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂ.ಗ್ರಾ ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್, ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ಮೇಳನದ ರೂಪರೇಷೆಗಳನ್ನು ವಿವರಿಸಿದರು
ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಜಿಲ್ಲಾ ಕೋಶಾಧ್ಯಕ್ಷ ಡಾ.ಮುನಿರಾಜು, ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್, ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಮಾಜಿ ಅಧ್ಯಕ್ಷ ಬಿ.ಜಿ.ಅಮರನಾಥ್, ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ದೊಡ್ಡತುಮಕೂರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್, ಕನ್ನಡ ಜಾಗೃತಿ ವೇದಿಕೆಯ ನಾಗರಾಜ್, ಅಗ್ನಿ ವೆಂಕಟೇಶ್, ಪತ್ರಕರ್ತರಾದ ಗಂಗರಾಜು ಶಿರವಾರ, ರಾಜುಸಣ್ಣಕ್ಕಿ, ತೆರದಾಳ್‌ಶ್ರೀನಿವಾಸ್, ಕೊತ್ತೂರಪ್ಪ, ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಎಂ.ಕೆ.ವತ್ಸಲ, ಕರ್ನಾಟಕ ರಾಜ್ಯ ರೈತ ಸಂಘದ ಸತೀಶ್, ಕನ್ನಡ ಪಕ್ಷದ ವೆಂಕಟೇಶ್, ಮುನಿಪಾಪಯ್ಯ, ಡಾ.ರಾಜ್‌ಕುಮಾರ್‌ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಹಾಜರಿದ್ದರು.