ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಹಲವಾರು ವರ್ಷಗಳಿಂದ ಹಿಂದೂ ಸಮಾಜದ ಸಂಘಟನೆಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವಹಿಂದೂಪರಿಷತ್ ಹಾಗೂ ಶ್ರೀರಾಮಸೇನೆ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ಹಿಂದೂಗಳಲ್ಲಿ ಸಂಘಟನೆಯ ಕೊರತೆಯಾಗದಂತೆ ಜಾಗೃತೆ ವಹಿಸಬೇಕಾಗಿದೆ. ಹಿಂದೂ ಸಮಾಜ ಇನ್ನೂ ಶಕ್ತಿಶಾಲಿಯಾಗಿ ಬೆಳವಣಿಗೆಯಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಮಾಜ ಸಂಘಟನೆಯ ಕಾರ್ಯಕ್ಕೆ ಆದ್ಯತೆ ನೀಡಬೇಕೆಂದು ಶ್ರೀರಾಮಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಮೋದ್‌ಮುತಾಲಿಕ್ ತಿಳಿಸಿದರು.
ಕಾರ್ಯನಿಮಿತ್ತ ಬಳ್ಳಾರಿಗೆ ಹೋಗುವ ಸಂದರ್ಭದಲ್ಲಿ ಚಳ್ಳಕೆರೆ ನಗರಕ್ಕೆ ಆಗಮಿಸಿದ ಅವರನ್ನು ಸಂಘಟನೆಯ ಕಾರ್ಯಕರ್ತರು ಸ್ವಾಗತಿಸಿದರು. ಚಿತ್ರದುರ್ಗ ರಸ್ತೆಯಲ್ಲಿನ ಬೇಕರಿಮಂಜುನಾಥರವರ ಕಚೇರಿಯಲ್ಲಿ ಸಂಘಟನೆಯ ಕಾರ್ಯಕರ್ತರ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿಂದೂಸಮಾಜ ಎಂದೂ ದುರ್ಬಲವಾಗುವುದಿಲ್ಲ. ಸಮಾಜವನ್ನು ದುರ್ಬಲಗೊಳಿಸುವಂತಹ ಕೆಲಸವನ್ನು ಅನೇಕ ಮಾಡುತ್ತಾ ಬಂದಿದ್ಧಾರೆ. ಇದು ಸಂಘಟನೆಗೆ ಹೊಸದಲ್ಲ, ಕಳೆದ ಹಲವಾರು ದಶಕಗಳಿಂದಲೂ ಸಹ ಹಿಂದೂ ಸಂಘಟನೆಯ ಶಕ್ತಿಯನ್ನು ಕುಗ್ಗಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೂ ಸಹ ಹಿಂದೂ ಸಮಾಜ ಸಂಘಟನಾತ್ಮಕವಾಗಿ ಬೆಳೆದು ನಿಂತಿದೆ.
ಕಳೆದ ತಿಂಗಳು ಉತ್ತರ ಪ್ರದೇಶದ ಪ್ರಯಾಗದಲ್ಲಿ ನಡೆದ ಕುಂಭ ಮೇಳದಲ್ಲಿ ಭಾರತವೂ ಸೇರಿದಂತೆ ವಿದೇಶದಿಂದಲೂ ಭಕ್ತರು ಕೋಟ್ಯಾಂತರ ಸಂಖ್ಯೆಯಲ್ಲಿ ಆಗಮಿಸಿದ್ದರು. ಸುಮಾರು ೭೦ ಕೋಟಿ ಭಕ್ತರು ಮಹಾಕುಂಭಮೇಳದಲ್ಲಿ ಪಾಲ್ಗೊಂಡರು. ಹಿಂದೂ ಸಂಘಟನೆಯ ಶಕ್ತಿಯ ಒಂದು ರೂಪ ಮಹಾಕುಂಭ ಮೇಳ. ದೇಶದಲ್ಲಿ ವಿಷಬೀಜ ಬಿತ್ತುವ ಶಕ್ತಿಗಳ ವಿರುದ್ದ ಎಚ್ಚರಿಕೆ ವಹಿಸಬೇಕೆಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ, ಬಿಜೆಪಿ ಮಂಡಲ ಮಾಜಿಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ರೈತಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‌ಯಾದವ್, ಬೇಕರಿಮಂಜುನಾಥ, ವಿಶ್ವಹಿಂದೂಫರಿಷತ್ ತಾಲ್ಲೂಕು ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ, ಕಾರ್ಯದರ್ಶಿ ಕೆ.ಎಂ.ಯತೀಶ್, ಮಹಂತೇಶ್, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.