ಅಂಬೇಡ್ಕರ್ ವಿರುದ್ಧ ಅಭ್ಯರ್ಥಿ ಹಾಕಿ ಸೋಲಿಸಿದ್ದು ಕಾಂಗ್ರೆಸ್-ಸಿಟಿ ರವಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ವಿರುದ್ಧ ಅಭ್ಯರ್ಥಿ ಹಾಕಿದ್ದು ಕಾಂಗ್ರೆಸ್.  ಅಂಬೇಡ್ಕರ್ ಅವರ ಸೋಲಿಗೆ ಎಲ್ಲ ಬಗೆಯ ತಂತ್ರಗಾರಿಕೆಯನ್ನು ಹೆಣೆದಿದ್ದು ಕಾಂಗ್ರೆಸ್ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆರೋಪಿಸಿದ್ದಾರೆ.

ಅಂಬೇಡ್ಕರ್  ಅವರನ್ನು ಸೋಲಿಸಲು ಎಲ್ಲಾ  ಬಗೆಯ ಸಂಪನ್ಮೂಲಗಳನ್ನು ಕೂಡಿಸಿ ನಾರಾಯಣ ಸದೋಬಾ ಕರ್ಜೋಲ್ಕರ್ ಗೆ  ಕೊಟ್ಟಿದ್ದು ಕೂಡ ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಸೋಲಿಸಿದ ಏಕೈಕ ಕಾರಣಕ್ಕೆ ಪದ್ಮ ಭೂಷಣ ಪ್ರಶಸ್ತಿ ಕೊಟ್ಟಿದ್ದು ಕಾಂಗ್ರೆಸ್.

ಇಷ್ಟೆಲ್ಲಾ ಮಾಡಿದ ಕಾಂಗ್ರೆಸ್ ಇಂದು ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ವೀರ ಸಾವರ್ಕರ್ ಅವರು ಸಂಚು ಮಾಡಿದ್ದಾರೆಂದು, ಸಂಶೋಧಿತವಾಗಿ ದೃಢಪಡದ ಯಾವುದೋ ದಾಖಲಾತಿಯನ್ನು ಹಿಡಿದು ಕೆಳಮನೆಯಲ್ಲಿ ಸನ್ಮಾನ್ಯ ಪ್ರಿಯಾಂಕಾ ಖರ್ಗೆ ಸುಳ್ಳು ಆಪಾದನೆ ಮಾಡಿದ್ದಾರೆ ಎಂದು ಸಿಟಿ ರವಿ ವಾಗ್ದಾಳಿ ಮಾಡಿದರು. ದೇಶಪ್ರೇಮವನ್ನೇ ಉಸಿರಾಗಿಸಿ, ಅದೇ ಭಾವವನ್ನು ಲೇಖನಿಯಾಗಿಸಿ, ಈ ದೇಶವನ್ನು ಕಟ್ಟಲು ಶ್ರಮಿಸಿದ ಮಹಾನ್ ಚೇತನಕ್ಕೆ, ಯಾರೇ ಸಂಚು ಮಾಡಿದರು ಅದು ತಪ್ಪೇ. ನನ್ನನ್ನು ಕೇಳುವುದಾದರೆ ಅದು ಪಂಡಿತ್ ಜವಾಹರ್ಲಾಲ್ ನೆಹರು ಆಗಿರಬಹುದು, ಇಲ್ಲ ಬೇರೆ ಯಾರೂ ಆಗಿರಬಹುದು ಅದು ತಪ್ಪು ತಪ್ಪೇ.

ಈ ಆರೋಪವನ್ನ ಸನ್ಮಾನ್ಯ ಸಚಿವರು ಮಾಡಿದ ಮೇಲೆ, ಈ ವಿಷಯದ ಬಗ್ಗೆ ನನ್ನ ಹುಡುಕಾಟ ತೀವ್ರವಾಯಿತು, ಅಂಬೇಡ್ಕರ್ ಅವರ ಸಮಗ್ರ ಜೀವನ ಚರಿತ್ರೆಯಲ್ಲಿಯೂ, 1974ರಲ್ಲಿ ಸ್ವತಃ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಪುಸ್ತಕದಲ್ಲಿಯೂ, ಕರ್ನಾಟಕ ಕಾಂಗ್ರೆಸ್ ಪಕ್ಷ ಪ್ರಕಟಿಸಿದ ಅಂಬೇಡ್ಕರ್ ಸಮಗ್ರದಲ್ಲಿಯೂ ಈ ಬಗ್ಗೆ ಎಲ್ಲಿಯೂ ಸಾವರ್ಕರ್ ಅವರ ಈ ವಿಚಾರದ ಬಗ್ಗೆ ಉಲ್ಲೇಖವಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ..ಸನ್ಮಾನ ಸಚಿವರೇ ಗಮನವಿಟ್ಟು ಕೇಳಿ, ಅಂಬೇಡ್ಕರ್ ಅವರ ಏಳಿಗೆಯನ್ನ ಸಹಿಸದೆ, ಅವರನ್ನು ಹತ್ತಿಕ್ಕುವ ಕೆಲಸವನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ ಹಾಗೂ ಈ ಪಕ್ಷದ ನೇತಾರ ಪಂಡಿತ್ ಜವಾಹರ್ ಲಾಲ್ ನೆಹರು. ಇದಕ್ಕೆ ಎಲ್ಲ ತರಹದ ದಾಖಲೆಗಳು ಇವೆ, ಸಂಶೋಧಿತವಾಗಿ ದೃಢಪಟ್ಟಿವೆ ಮತ್ತಿದು ಐತಿಹಾಸಿಕ ಕರಾಳ ಸತ್ಯ ಸತ್ಯ ಸತ್ಯ ಎಂದು ಸಿಟಿ ರವಿ ತಿಳಿಸಿದ್ದಾರೆ.
ಸ್ವತಃ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಅವರದೇ ಆಪ್ತ ಸಹಾಯಕ ನಾರಾಯಣ ಸದೋಬಾ ಕರ್ಜೋಲ್ಕರ್ ನ್ನು ಎತ್ತಿಕಟ್ಟಿ
, ಅಂಬೇಡ್ಕರ್ ವಿರುದ್ಧ ಅಭ್ಯರ್ಥಿಯನ್ನಾಗಿ ಮಾಡಿದ್ದು ಈ ಕಾಂಗ್ರೆಸ್. ಇವೆಲ್ಲದಕ್ಕೂ ಐತಿಹಾಸಿಕ ದಾಖಲೆಗಳಿವೆ..

ಇದಷ್ಟೇ ಅಲ್ಲದೆ, ಕೇವಲ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರನ್ನು ಸೋಲಿಸಿದ ಮಾತ್ರಕ್ಕೆ, ನಾರಾಯಣ  ಖರ್ಜೋಲ್ಕರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟಿದ್ದು ಈ ದೇಶದ ಜನತೆ ಮರೆಯುತ್ತದೆ ಏನ್ರಿ ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಸಾಹೇಬ್ರೆ ಎಂದು ಸಿ ಟಿ ರವಿ ಹೇಳಿದ್ದಾರೆ.

ಇಷ್ಟೇ ಅಲ್ಲ..ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಖುಷಿಗಾಗಿ, ತಮ್ಮ ಗೆಳತಿ, ಲೇಡಿ ಎಡ್ವಿನಾ ಮೌಂಟ್ ಬ್ಯಾಟನ್ ಗೆ, ಸನ್ಮಾನ್ಯ ಶ್ರೀ ಪಂಡಿತ ಜವಾಹರ್ಲಾಲ್ ನೆಹರು ಅವರು ಪತ್ರ ಬರೆದು, ಹಿಂದೂ ಕೋಮುವಾದಿಗಳ ಜೊತೆ ಕೈಜೋಡಿಸಿದ್ದಕ್ಕೆ ಅಂಬೇಡ್ಕರ್ ರನ್ನ ಸೋಲಿಸಿದ್ದು, ಈ ಸೋಲನ್ನ ಸಂಭ್ರಮಿಸಬೇಕು ಎಂಬ ಬರೆದ ಪತ್ರದ ದಾಖಲೆಯನ್ನು ಮರೆತಿದ್ದೀರಾ ಸನ್ಮಾನ್ಯ ಸಚಿವರೇ? ಎಂದು ಸಿಟಿ ರವಿ ಖಾರವಾಗಿ ಪ್ರಶ್ನಿಸಿದ್ದಾರೆ.

ನನ್ನ ತಿಳುವಳಿಕೆ ಮತ್ತು ಚಾರಿತ್ರಿಕ ದಾಖಲೆಗಳ ಪ್ರಕಾರ ಹಿಂದೂ ಮಹಾಸಭಾ ಮತ್ತು ಜನಸಂಘ ಅಂಬೇಡ್ಕರ್ ಅವರ ವಿರುದ್ಧ ಚುನಾವಣೆಯಲ್ಲಿ ಅಭ್ಯರ್ಥಿಯನ್ನೇ ಹಾಕಿರಲಿಲ್ಲ. ಮಹಾತ್ಮ ಗಾಂಧೀಜಿಯವರ ಹತ್ಯೆಯ ಸುಳ್ಳು ಆರೋಪದ ಮೇಲೆ ಸಾವರ್ಕರ್ ಅವರನ್ನು ಜೈಲಿಗೆ ಕಳಿಸಿದ್ದು ಕಾಂಗ್ರೆಸ್.

ಅಂತಹದರಲ್ಲಿ ಅವರ ಜೊತೆ, ಕೈಜೋಡಿಸಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಸಾವರ್ಕರ್ ಎನ್ನುವ ನಿಮ್ಮ ಆರೋಪದಲ್ಲಿ ಯಾವ ಹುರುಳಿದೆ ಸ್ವಾಮಿ ಇಂಥಹದ್ದನ್ನು ಯಾರಾದರೂ ನಂಬಲಿಕ್ಕೇ ಸಾಧ್ಯವೇ? ಎಂದು ಸಿಟಿ ರವಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಇನ್ನೊಂದು ಮಾತು.. ಇಂದಿನ ಬಿಜೆಪಿಯ ಹಿಂದಿನ ಅವತಾರ ಜನಸಂಘ, ಜನಸಂಘ ಬಹಿರಂಗವಾಗಿ ಅಂಬೇಡ್ಕರ್ ಅವರನ್ನು ಬೆಂಬಲಿಸಿತು. ಆದರೆ 3 ತಿಂಗಳು ನಡೆದ ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಿತೂರಿಯಿಂದ  ಅಂಬೇಡ್ಕರ್ ಅವರು ಸೋಲಬೇಕಾಯಿತು. ಸ್ವತಃ ಅಂಬೇಡ್ಕರ್ ಅವರೇ ಕಾಂಗ್ರೆಸ್ ಒಂದು ಉರಿಯುವ ಮನೆ ಎಂದು ಹೇಳಿರುವುದು ಕೂಡ ದಾಖಲಾಗಿದೆ

 ದೀನ ದಲಿತರ ಹಾಗೂ ದೇಶದ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಅಪ್ಪಟ ಅಭಿಮಾನಿಗಳಾಗಿದ್ದರೆ, ನಿಮ್ಮ ತಂದೆ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಕಾಂಗ್ರೆಸ್ ಕಡೆಗೆ ಮುಖ ಮಾಡುತ್ತಿರಲಿಲ್ಲ, ತಮಗೂ ಸಹ ಈ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸುವ, ಕಾಂಗ್ರೆಸ್ಸನ್ನು ಕೊಂಡಾಡುವ ಪ್ರಮೇಯ ಬರುತ್ತಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಅಂಬೇಡ್ಕರ್ ಅವರನ್ನು ಅವಮಾನಿಸಿ ಮೋಸ ಮಾಡಿದ ಮೇಲೆಯೂ, ಮತ್ತೆ ಪದೇ ಪದೇ ಸುಳ್ಳು ಹೇಳಿಜನಸಾಮಾನ್ಯರನ್ನು ನಂಬಿಸಲು ನೀವು ಮಾಡುತ್ತಿರುವ ವ್ಯರ್ಥ ಪ್ರಯತ್ನ ಎಂದಿಗೂ ಫಲ ನೀಡುವುದಿಲ್ಲ.. ನೆನಪಿಡಿ, ಯಾವತ್ತೂ ಸತ್ಯಕ್ಕೆ ಜಯ ಎಂದು ಸಿಟಿ ರವಿ ಎಚ್ಚರಿಸಿದ್ದಾರೆ.

 

Share This Article
error: Content is protected !!
";