ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಮಕೂರು ಕ್ಯಾತಸಂದ್ರದ ನಿವಾಸಿ, ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಮೂವರು ಶಂಕಿತ ಆರೋಪಿಗಳನ್ನು ಕ್ಯಾತಸಂದ್ರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಮೂವರು ಶಂಕಿತ ಆರೋಪಿಗಳಲ್ಲಿ ಪುಷ್ಪಾ ಎಂಬ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ರಾಜೇಂದ್ರ ಅವರ ಹತ್ಯೆಗೆ ರೌಡಿಶೀಟರ್ ಸೋಮ ಎಂಬಾತ ಸಂಚು ರೂಪಿಸಿದ್ದ ಕುರಿತು 18 ನಿಮಿಷಗಳ ಆಡಿಯೋವೊಂದು ವೈರಲ್ ಆಗಿದೆ.
ರಾಜೇಂದ್ರ ಅವರ ಆಪ್ತ ರಾಕಿ ಮತ್ತು ಸೋಮನ ಆಪ್ತೆ ಪುಷ್ಪಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಈ ಬೆನ್ನಲ್ಲೇ ಸೋಮ, ಪುಷ್ಪಾ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಡಿಯೋದಲ್ಲಿ ಏನಿದೆ?
ರಾಕಿ ಜೊತೆ ಮಾತನಾಡಿದ್ದ ಪುಷ್ಪಾ ಅವರ ಆಡಿಯೋ ವೈರಲ್ ಆಗಿದ್ದು ಆ ಆಡಿಯೋದಲ್ಲಿ ರಾಜೇಂದ್ರ ಹತ್ಯೆಗೆ ಸೋಮು ಎನ್ನುವ ರೌಡಿ ಶೀಟರ್ ಗೆ 75 ಲಕ್ಷ ರೂ. ಗುತ್ತಿಗೆ (ಸುಪಾರಿ) ಬಂದಿತ್ತು. ಇದಕ್ಕಾಗಿ 5 ಲಕ್ಷ ರೂ. ಹಣ ಅಡ್ವಾನ್ಸ್ ನೀಡಿದ್ದರು. ಇದು ನಿಜ. ಬೇಕಾದರೆ ಸೋಮನನ್ನು ಪೊಲೀಸರು ವಿಚಾರಿಸಿದರೆ ಎಲ್ಲಾ ಹೊರಬರುತ್ತದೆ. ಈ ವಿಚಾರ ಬೇಕಾದರೆ ರಾಜೇಂದ್ರ ಅವರಿಗೆ ನಾನು ಹೇಳುತ್ತೇನೆ. ಅವರ ಬಳಿ ಕರೆದುಕೊಂಡು ಹೋಗು ಎಂದು ಪುಷ್ಪಾ ತಿಳಿಸಿದ್ದಾರೆ.
ನವೆಂಬರ್‌ತಿಂಗಳಲ್ಲಿದ್ದ ರಾಜೇಂದ್ರ ಅವರ ಪುತ್ರಿಯ ಹುಟ್ಟುಹಬ್ಬ ಸಮಾರಂಭದಲ್ಲಿ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರು ಹುಡುಗರನ್ನು ಕಳುಹಿಸಿದ್ದು ಕೂಡ ಸೋಮು. ಅಲ್ಲದೆ ಜೈಪುರದ ಇನ್ನೊಬ್ಬ ರೌಡಿ ಶೀಟರ್‌ನನ್ನ ಕೊಲ್ಲುವುದಾಗಿ ಸೋಮು ಹೇಳಿದ್ದಾನೆ. ಇದಕ್ಕಾಗಿ ಕಲಾಸಿಪಾಳ್ಯದಲ್ಲಿರುವ ಇಬ್ಬರು ತಮಿಳು ಹುಡುಗರನ್ನು ಕೂಡ ಕರೆಸಿಕೊಂಡಿದ್ದಾನೆ. ಸೋಮುಗೆ ರೂ.5 ಲಕ್ಷ ದುಡ್ಡು ಬಂದಿರುವುದು ದೇವರ ಸಾಕ್ಷಿಯಾಗಿಯೂ ನಿಜ. ಮನು ಎಂಬಾತನ ಅಕೌಂಟ್‌ಗೆ ಹಣ ಹಾಕಲಾಗಿದೆ ಎಂದು ಪುಷ್ಪಾ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ದೂರು ನೀಡಿದ್ದ ರಾಜೇಂದ್ರ: ಎಂಎಲ್ಸಿ ರಾಜೇಂದ್ರ ಅವರು ತಮ್ಮ ವಿರುದ್ಧ ಕೊಲೆ ಸಂಚು ನಡೆದಿದೆ ಎಂದು ಆರೋಪಿಸಿ ತುಮಕೂರು ಎಸ್ಪಿ ಕೆ.ವಿ. ಅಶೋಕ್ ಅವರಿಗೆ ದೂರು ನೀಡಿದ ಬಳಿಕ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಸೋಮ ಅಲಿಯಾಸ್ ಜಯಪುರ ಸೋಮ, ಭರತ್, ಅಮಿತ್, ಗುಂಡಾ ಮತ್ತು ಯತೀಶ್ ಎಂಬುವರ ವಿರುದ್ಧ ಬಿಎನ್ಎಸ್ ಕಲಂ 109, 329(4), 61(2) ಹಾಗೂ 190 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.