ದುರ್ಗದ ಪಿಎಸ್ಐ ಹಾಗೂ ಬಿಜೆಪಿ ಮುಖಂಡನ ನಡುವಿನ ಗದ್ದಲ ಇಟ್ಡುಕೊಂಡು ಬರೆದ ಸಂಪಾದಕೀಯ ವೈರಲ್

News Desk

ಆಡಳಿತದಲ್ಲಿ ಹಿಡಿತ, ಮಿಡಿತ ಕಳೆದುಕೊಂಡ ಸರ್ಕಾರ!
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ಪಿಎಸ್ಐ ಹಾಗೂ ಬಿಜೆಪಿ ಮುಖಂಡನ ನಡುವಿನ ಗದ್ದಲ ಇಟ್ಡುಕೊಂಡು ಏಪ್ರಿಲ್ ಸಂಚಿಕೆಯ ಸಮಾಜಮುಖಿ ಪತ್ರಿಕೆಯಲ್ಲಿ ಚಂದ್ರಕಾಂತ್ ವಡ್ಡು ಅವರು ಬರೆದಿರುವ ಸಂಪಾದಕೀಯ ಸಖತ್ ವೈರಲ್ ಆಗಿದೆ. ಈ ಘಟನೆ ದುರ್ಗದಲ್ಲಿ ನಡೆದಿದ್ದರಿಂದಾಗಿ ಆ ಸಂಪಾದಕೀಯವನ್ನು ಚಂದ್ರವಳ್ಳಿ ಪ್ರಾದೇಶಿಕ ಪತ್ರಿಕೆ ದುರ್ಗದ ಮತ್ತು ಪತ್ರಿಕೆಯ ಓದುಗರಿಗಾಗಿ ಯಥಾವತ್ ಪ್ರಕಟಿಸಿದೆ. ಸಂಪಾದಕರು.

ಚಂದ್ರಕಾಂತ್ ವಡ್ಡು ಅವರು ಬರೆದಿರುವ ಸಂಪಾದಕೀಯ………
ನಾನು ಅತ್ಯಂತ ಗೌರವಿಸುವ ಹಿರಿಯ ಸಾಹಿತಿಯೊಬ್ಬರು ವಾಟ್ಸಾಪ್‌ನಲ್ಲಿ ಒಂದು ವಿಡಿಯೋ ಸಂದೇಶ ಕಳುಹಿಸಿದರು. ಅದರ ಕೆಳಗೆ
, ‘ಬಿತ್ತು ನೋಡಿ ಬಿಜೆಪಿ ಜಿಲ್ಲಾಧ್ಯಕ್ಷನಿಗೆ…ಎಂಬ ಟಿಪ್ಪಣಿ ಬೇರೆ. ನಾನು ಸಾಮಾನ್ಯವಾಗಿ ಫಾರ್ವರ್ಡ್ ಸಂದೇಶಗಳನ್ನು ಓದದೇ ಅಳಿಸಿಹಾಕುತ್ತೇನೆ. ಅದೇಕೋ ಸಂದೇಶ ಕಳಿಸಿದವರ ಮೇಲಿನ ಅಭಿಮಾನದಿಂದ ವಿಡಿಯೋ ನೋಡಿದೆ.

ಅದರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬ ಮಧ್ಯ ವಯಸ್ಕ ವ್ಯಕ್ತಿಯ ಮೇಲೆ ನಡು ಬೀದಿಯಲ್ಲಿಯೇ ಹಲ್ಲೆ ಮಾಡುವ ದರ್ಪದ ದೃಶ್ಯವಿತ್ತು.

ವಿಚಿತ್ರವೆಂದರೆ ಪೊಲೀಸ್ ಸಮವಸ್ತ್ರದ ಅಧಿಕಾರ ಮದ, ದೌರ್ಜನ್ಯ, ದುಷ್ಟತನ ಯಾವುದೂ ನಮ್ಮ ಪ್ರಜ್ಞಾವಂತ ಸಾಹಿತಿಯ ಪ್ರಜಾಸತ್ತಾತ್ಮಕ ದೃಷ್ಟಿಗೆ ನಿಲುಕಿದಂತೆ ಕಾಣಲಿಲ್ಲ. ಬದಲಾಗಿ, ಹಲ್ಲೆಗೊಳಗಾದ ಆಸಾಮಿ ಪ್ರತಿನಿಧಿಸುವ ರಾಜಕೀಯ ಪಕ್ಷ ಎದ್ದು ಕಂಡಿದೆ. ಸಾಹಿತಿಯ ಅತ್ಯಾಸಕ್ತಿ ಕಾರಣದಿಂದಾಗಿ ನನಗೂ ಹಲ್ಲೆಗೊಳಗಾದ ವ್ಯಕ್ತಿಯ ಹಿನ್ನೆಲೆ, ಎಸಗಿರಬಹುದಾದ ಅಪರಾಧ ಕುರಿತು ಕುತೂಹಲ ಉಂಟಾಯಿತು. ಆ ಊರಿನ ನನ್ನ ಸಂಪರ್ಕಗಳನ್ನು ಬಳಸಿ ಆ ಘಟನೆಯ ಮೂಲ ಪರಿಶೀಲಿಸಿದೆ.

ಜಿಲ್ಲಾ ಮಟ್ಟದ ಆ ರಾಜಕಾರಣಿ ಸಂಗಡಿಗರೊಂದಿಗೆ ತಡರಾತ್ರಿ ಊಟ ಮುಗಿಸಿ ಹೋಟೆಲ್ ಮುಂದೆ ನಿಂತಾಗ ಅಲ್ಲಿಗೆ ಅವತರಿಸಿದ ಕೋಪಿಷ್ಠ ಪಿ.ಎಸ್.ಐ. ಹಲ್ಲೆ ಮಾಡಿದ್ದು, ಪ್ರತಿಯಾಗಿ ಆ ವ್ಯಕ್ತಿಯೂ ಕೈಮಾಡಿದ್ದು ಗೊತ್ತಾಯಿತು. ಇಂಥ ಘಟನೆ ನಡೆದಾಗ ಸಾಮಾನ್ಯವಾಗಿ ಎಲ್ಲರೂ ಅನುಮಾನ ಪಡುವಂತೆ ಆ ವ್ಯಕ್ತಿ ಮದ್ಯವ್ಯಸನಿ ಆಗಿರಲಿಲ್ಲ. ಪಿ.ಎಸ್.ಐ.ಗೆ ಆತನ ಮೇಲೆ ಅಷ್ಟೊಂದು ರೋಷದಿಂದ ಏರಿಹೋಗಲು ಬಲವಾದ ಕಾರಣವೂ ಇರಲಿಲ್ಲ.

ಸರ್ಕಾರಿ ಅಧಿಕಾರಿಗಳಿಗೆ, ಅದರಲ್ಲೂ ಖಾಕಿಯವರಿಗೆ ಎದುರಿನವರು ನ್ಯಾಯಬದ್ಧವಾಗಿ ಮಾತನಾಡುವುದು, ವಾದಿಸುವುದು ಅಥವಾ ಕಾನೂನು ಉಲ್ಲೇಖಿಸುವುದನ್ನು ಸಹಿಸಲಾಗುವುದಿಲ್ಲ. ಆ ಸಮಯದಲ್ಲಿ ಅವರು ಸಭ್ಯತೆಯ ಎಲ್ಲೆ ಮೀರಿ ಮಾತಿನಲ್ಲೂ ದೈಹಿಕವಾಗಿಯೂ ಎರಗಲು ಜಿದ್ದು ಸಾಧಿಸಲು ಹೇಸುವುದಿಲ್ಲ. ಅವರ ಮಾನಸಿಕತೆಯೇ ಆ ರೀತಿ ಸಿದ್ಧಗೊಂಡಿರುತ್ತದೆ.

ಆ ರಾತ್ರಿ ಆದದ್ದೂ ಅದೇ. ಆದರೆ ಅದ್ಯಾವುದನ್ನೂ ತಿಳಿಯುವ ಪ್ರಯತ್ನವನ್ನೇ ಮಾಡದ ಸಾಹಿತಿಮಿತ್ರರು ಪೊಲೀಸ್ ದೌರ್ಜನ್ಯವನ್ನು ಸಂಭ್ರಮಿಸಿದ್ದು, ಆ ಸಂಭ್ರಮವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ನಿರ್ಲಕ್ಷಿಸುವ ಸಂಗತಿಯಲ್ಲ. ಕಾವ್ಯ ಸಂವೇದನೆಯ ಮುಸುಕಿನೊಳಗೆಲ್ಲೋ ಅಡಗಿದ್ದ ಸಣ್ಣತನ ಹೊರಗಿಣುಕಿ ಆನಂದ ಅನುಭವಿಸುವ ಇಂಥ ಕ್ರಿಯೆಯನ್ನು ಅರ್ಥೈಸುವ ತುರ್ತು ಇದೆ.

ರಾಜ್ಯದ ಆಡಳಿತ ವ್ಯವಸ್ಥೆಯ ಎಲ್ಲ ಹಂತಗಳಲ್ಲಿ ವ್ಯಾಪಿಸಿರುವ ಲಂಚಗುಳಿತನ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಪೀಕುತ್ತಿರುವುದು ಎಲ್ಲರ ಅನುಭವಕ್ಕೂ ಬಂದಿದೆ. ಪೊಲೀಸ್ ಇಲಾಖೆಯ ಹೆಚ್ಚುವರಿ ಹಾರಾಟಕ್ಕೆ ಕಾರಣವಾಗಿರುವುದು ಅವರು ಧರಿಸುವ ಖಾಕಿಯೋ, ಮೇಲಿನವರ ಅಭಯವೋ, ಹೂಡಿರುವ ಕೋಟಿಗಳೋ ಎಂದು ವಿಂಗಡಿಸುವ ಅಗತ್ಯವಿಲ್ಲ; ಈ ಮೂರರ ಮಿಶ್ರಣವೇ ದರ್ಪ-ದೌರ್ಜನ್ಯದ ಮೂಲ.

ಈ ಅವಾಂತರಗಳ ಇರುವಿಕೆಯ ಮಾಹಿತಿ ವಿಧಾನಸೌಧದ ಮೂರನೇ ಮಹಡಿ ತಲುಪಿಲ್ಲ ಎಂದು ಸರ್ಕಾರದ ವಕ್ತಾರರು ಹೇಳಲೂ ಸಾಧ್ಯ. ಆದರೆ ಕೇಳುವವರು ಕಿವಿಮೇಲೆ ಚೆಂಡುಹೂವಿನ ತೋಟ ಇಟ್ಟುಕೊಂಡಿರಬೇಕಷ್ಟೇ! ಒತ್ತಡ ಹೆಚ್ಚಾದರೆ ಸಾಂಪ್ರದಾಯಿಕವಾಗಿ ಎಸ್‌ಐಟಿಯನ್ನೋ ಆಯೋಗವನ್ನೋ ರಚಿಸಿ ತಮ್ಮ ಎಂದಿನ ಅಧಿಕಾರ ರಾಜಕಾರಣದಲ್ಲಿ ಮುಳುಗುವುದು ವಿಧಾನಸೌಧದ ಕಂಬಗಳಿಗೆ ಸುಲಭ.

ಸರ್ಕಾರದ ಖರ್ಚುವೆಚ್ಚಗಳ ವಹಿವಾಟನ್ನು ವರ್ಷಕ್ಕೊಮ್ಮೆ ಮಂಡನೆಯಾಗುವ ಬಜೆಟ್ ಹಾಳೆಗಳ ಮೂಲಕ ಅರ್ಥ ಮಾಡಿಕೊಳ್ಳುವುದು ಸಾಮಾನ್ಯ ಪದ್ಧತಿ. ಆದರೆ ಯಾವ ಅಧಿಕೃತ ಲೆಕ್ಕಪತ್ರಗಳಲ್ಲಿಯೂ ದಾಖಲಾಗದ ಭ್ರಷ್ಟಾಚಾರದ ಅಗಾಧತೆಯ ಮುಂದೆ ಬಹುಶಃ ಸರ್ಕಾರದ ವಾರ್ಷಿಕ ಆಯವ್ಯಯದ ಗಾತ್ರ ಏನೂ ಅಲ್ಲವೆನ್ನಿಸುತ್ತದೆ.

ಇದು ಅರ್ಥಶಾಸ್ತ್ರದ ಸೂತ್ರಗಳನ್ನು ಮರುರೂಪಿಸಬೇಕಾದ ಸನ್ನಿವೇಶ. ಕರ್ನಾಟಕದ ಆರ್ಥಿಕತೆಯ ಏಳುಬೀಳಿನ ಚರ್ಚೆಯಲ್ಲಿ ಬಹುಮುಖ್ಯ ಸೂಚಕವಾಗಿ ಲಂಚಾರ್ಥಿಕತೆಯನ್ನು ಬಳಸುವ ಕಾಲ ದೂರವೇನಿಲ್ಲ ಎನ್ನಿಸುತ್ತದೆ.

ಸಮಾಜಮುಖಿಯ ಪ್ರತೀ ಸಂಚಿಕೆಯೂ ಪ್ರಾತಿನಿಧ್ಯ ಮತ್ತು ವೈವಿಧ್ಯ ಅಳವಡಿಸಿಕೊಂಡು ಪ್ರಬುದ್ಧತೆ-ಹೊಣೆಗಾರಿಕೆ ಮೆರೆಯಲು ಹೆಣಗುವುದನ್ನು ಸೂಕ್ಷ್ಮಮತಿಗಳಾದ ನೀವು ಸಹಜವಾಗಿ ಗಮನಿಸಿರುತ್ತೀರಿ. ಆ ಕಾಳಜಿ, ಕಳಕಳಿಗೆ ಈ ಸಂಚಿಕೆಯೂ ಹೊರತಲ್ಲ ಎಂಬುದನ್ನು ಮತ್ತೊಮ್ಮೆ ಗುರುತಿಸುತ್ತೀರಿ ಎಂದು ನಂಬುತ್ತೇನೆ.-ಚಂದ್ರಕಾಂತ ವಡ್ಡು [ಸಮಾಜಮುಖಿ ಏಪ್ರಿಲ್ 2025 ಸಂಪಾದಕೀಯ]

 

Share This Article
error: Content is protected !!
";