ಕ್ಷೇತ್ರದ ನೀರಾವರಿಗೆ ಆದ್ಯತೆ ನೀಡಿದ್ದೇನೆ-ಸಚಿವ ಸುಧಾಕರ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮ ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ, ಕ್ಷೇತ್ರದ ಶಾಸಕ ಡಿ.ಸುಧಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಎರಡು ವರ್ಷ ಪೂರೈಸಲಿದೆ. ಪಕ್ಷದ ಅಧ್ಯಕ್ಷರು, ಕಾರ್ಯಕರ್ತರ ಕಡೆ ಗಮನ ನೀಡಲು ಸೂಚಿಸಿದ್ದಾರೆ. ಜಿಲ್ಲೆಯ ಮಹತ್ವದ ಭದ್ರಾ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 2600 ಕೋಟಿ ನೀಡಲಾಗಿದೆ. ಶಾಶ್ವತ ನೀರಾವರಿಗೆ ಅದ್ಯತೆ ನೀಡಲಾಗಿದೆ. ಕಾರ್ಯಕರ್ತರ ಸಹಕಾರದಿಂದ ತಾಲೂಕಿನ ಅಭಿರುದ್ದಿಗೆ ಶ್ರಮಿಸಿದ್ದೇನೆ. ಅಧಿಕಾರ ಇಲ್ಲದ ಸಂದರ್ಭದಲ್ಲೂ ನಿಮ್ಮ ಜೊತೆ ನಿಂತಿದ್ದೇನೆ. ಭದ್ರಾ ಯೋಜನೆಯಿಂದ ಹಿರಿಯೂರು ತಾಲೂಕಿನ 1,85000 ಎಕರೆಗೆ ಹನಿ ನೀರಾವರಿ ಮೂಲಕ ಭದ್ರಾ ನೀರಾಯಲಿದ್ದು ಸಿಂಹಪಾಲು ದೊರೆತಿದೆ ಎಂದು ಸಚಿವರು ತಿಳಿಸಿದರು.

ಸೈದ್ದಾಂತಿಕ ಸಿದ್ದಾಂತದೊಳಗಿನ ರಾಜಕಾರಣ ನನ್ನದು. ಕ್ಷೇತ್ರದ ಬಡವರ ಹಿತಕ್ಕಾಗಿ ನಾನು ಸದಾ ಮಿಡಿಯುತ್ತೇನೆ. ಜನರು ನನ್ನೊಂದಿಗೆ ಇದ್ದಾರೆ.  ಕಾರ್ಯಕರ್ತರು ಮುಖಂಡರಿಗೆ ನಾನು ಸಂಪರ್ಕ ಸೇತುವೆ ಇದ್ದಂತೆ. ಸರ್ಕಾರ ಬರಲು ನಿಮ್ಮ ಶ್ರಮವಿದೆ. ತತ್ಕಾಲಿಕ ವ್ಯವಸ್ಥೆ ರೂಪಿಸಿ ವಂಚಿಸುವುದು ಬಿಜೆಪಿಯ ಸಿದ್ದಾಂತ ಎಂದು ಸಚಿವ ಸುಧಾಕರ್ ಟೀಕಿಸಿದರು.

ನರೇಗಾ ತಂದದ್ದು ಕಾಂಗ್ರೆಸ್ ಸರ್ಕಾರ. ಇಂತಹ ಸಾಧನೆಗಳನ್ನು ಜನ ಗ್ರಹಿಸಬೇಕು. ಗ್ಯಾರಂಟಿ ಸ್ಕೀಮ್ ಗೆ ಪ್ರತಿ ತಾಲೂಕುವಾರು ಇಪ್ಪತ್ತು ಕೋಟಿ ಹಣ ನೀಡಲಾಗಿದೆ. ಪ್ರಸ್ತುತ ಬಜೆಟ್ ನಲ್ಲಿ ಅಭಿವೃದ್ದಿಗೆ ಅದ್ಯತೆ ನೀಡಲಾಗಿದೆ. ಬಿಜೆಪಿ ಅಧಿಕಾರದಿಂದ ಇಳಿಯುವಾಗ ಮೂರು ಲಕ್ಷ ಕೋಟಿ ಸಾಲ ಹೊರಿಸಿದ್ದಾರೆ. ಆದರು ಅಭಿವೃದ್ದಿಗೆ ಯಾವುದೆ ಸಮಸ್ಯೆಯಾಗಿಲ್ಲ. ಗ್ಯಾರಂಟಿ ಯೋಜನೆಗಳ ಫಲವಾಗಿ ಹಳ್ಳಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನ ಗೌರವಿಸುತ್ತಾರೆ ಎಂದು ಸಚಿವ ಸುಧಾಕರ್ ಹೇಳಿದರು.

ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಲಾಗುವುದು ತಾಲೂಕಿನ 33 ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಪ್ರಮುಖವಾಗಿ ಗಮನಹರಿಸಲಾಗಿದೆ. ಕಾರ್ಯಕರ್ತರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದೆ ಪರಸ್ಪರ ದ್ವೇಷಾಸೂಯೆ ಮೂಡಿಸಿಕೊಳ್ಳದಿರಿ. ಅದರಿಂದ ಪಕ್ಷದ ವರ್ಚಸ್ಸು ಹಾಳಾಗುತ್ತದೆ. ಪಕ್ಷ ಶಾಶ್ವತವಾಗಿರುತ್ತದೆ. ಸಂಘಟಿತ ಪ್ರಯತ್ನಗಳು ಸದಾ ಫಲ ಕೊಡಲಿವೆ. ಕಾರ್ಯಕರ್ತರ ದೂರು ದುಮ್ಮಾನಗಳನ್ನ ಆಲಿಸುತ್ತೇನೆ ಎಂದು ಸುಧಾಕರ್ ತಿಳಿಸಿದರು.

ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಮಾತನಾಡಿ, ಕಾರ್ಯಕರ್ತರ ಬಗ್ಗೆ ನನಗೆ ಅಪಾರ ಗೌರವವಿದೆ. ತಮ್ಮ ನಾಯಕರ ಗೆಲುವಿಗೆ ಶ್ರಮಿಸಿ ಸಂಭ್ರಮಿಸುವ ಕಾರ್ಯಕರ್ತರು ಅವರ ಶ್ರಮ ಮರೆಯದಿರೋಣ. ಜೆಡಿಎಸ್-ಬಿಜೆಪಿ ಮೈತ್ರಿಯಿಂದ ನಾನು ಸೋಲುಂಡೆ. ಸರ್ವಜನರ ಹಿತಕಾಯುವ ಪಕ್ಷ ಕಾಂಗ್ರೆಸ್. ಆರ್ ಎಸ್ ಎಸ್ ಕಛೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಡುವುದಿಲ್ಲ. ಆದರೆ ಅಧಿಕಾರ ಮತ್ತು ಓಟಿಗಾಗಿ ಬಿಜೆಪಿ ಅಂಬೇಡ್ಕರ್ ಜಪ ಶುರುಮಾಡಿದೆ. ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯುವ ಶಕ್ತಿ ನಿಡಿದ್ದು ಕಾಂಗ್ರೆಸ್ ಪಕ್ಷ. ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿ ಬಗ್ಗೆ ಎಚ್ಚರ ವಹಿಸಬೇಕು. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಅಲ್ಲದೇ ರಾಜ್ಯದ ಅಭಿವೃದ್ದಿ  ಪೂರಕವಾಗಿ ಸ್ಪಂದಿಸುತ್ತಿದೆ. ಬಿಜೆಪಿಯ ಹುಸಿ ಸುಳ್ಳುಗಳನ್ನು ನಂಬದಿರಿ. ಅಪ್ಪರ್ ಭದ್ರಾ ಯೋಜನೆಗೆ ಅನುದಾನ ಘೋಷಿಸಿದ ಕೇಂದ್ರ ಸರ್ಕಾರ ಬಿಡಿಗಾಸು ಕೊಡಲಿಲ್ಲ. ಗೋವಿಂದ ಕಾರಜೋಳ ಅವರು ಈ ಬಗ್ಗೆ ತುಟಿ ಬಿಚ್ಚಲ್ಲ. ಮೋದಿಯವರ ಬಳಿ ಹೋಗಲು ಅವರಿಗೆ ಸಾಧ್ಯವಿಲ್ಲವೇ? ಮೀಸಲಾತಿ ವಿಚಾರವಾಗಿ ಕಾಡುಗೊಲ್ಲರಿಗೆ ಕೇಂದ್ರ ಸರ್ಕಾರ ದ್ರೋಹಬಗೆದಿದೆ ಎಂದು ಚಂದ್ರಪ್ಪ ಆರೋಪಿಸಿದರು.

ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಇತಿಹಾಸದ ಪುಟಗಳನ್ನು ಒಮ್ಮೆ ಅಧ್ಯಯನ ಮಾಡಿದರೆ ತಿಳಿಯಲಿದೆ, ಜನ ಸಾಮಾನ್ಯರು, ಬಡವರ ಮನದಲ್ಲಿ ಶಾಶ್ವತವಾದ ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಸಾಮಾಜಿಕ ನ್ಯಾಯ ಕಾಣಲು ಸಾಧ್ಯವಿದೆ. ಆದರೆ ಸ್ಥಾಪಿತವಾಗಿ 43 ವರ್ಷಗಳ ಗತಿಸಿರುವ ಬಿಜೆಪಿ ಪಕ್ಷ ಅತೀ ಹೆಚ್ಚಿನ ದೇಣಿಗೆ ಹೊಂದಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಿಂದಲೂ ಜನರ ಹಿತಕ್ಕಾಗಿ ಕೆಲಸ ಮಾಡಿದೆ ಎಂದು ಅವರು ತಿಳಿಸಿದರು.
ರಾಜಕಾರಣವನ್ನು ಸೇವೆ ಎಂದು ತಿಳಿದಿರುವ ಕಾಂಗ್ರೆಸ್ ಪಕ್ಷ ಜನಪರವಾದ ಕಾಳಜಿಯುತ ಕಾರ್ಯಕ್ರಮಗಳನ್ನು ನೀಡಿದೆ. ಕಾರ್ಯಕರ್ತರು ಸಕರಾತ್ಮಕ ಚಿಂತನೆಗಳೊಂದಿಗೆ ಅಲೋಚಿಸಬೇಕು. ಪಕ್ಷದ ಸಿದ್ಧಾಂತ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಶಾಸಕ ರಘುಮೂರ್ತಿ ಕರೆ ನೀಡಿದರು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ ಕೆ ತಾಜ್ ಪೀರ್ ಮಾತನಾಡಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಕಾರ್ಯಕರ್ತರ ಶ್ರಮದಿಂದ ಇಂದು ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಯಾವುದೇ ಚುನಾವಣೆ ಗೆಲ್ಲಲು ಕಾರ್ಯಕರ್ತರು ಕಾರಣೀಭೂತರು. ಪಕ್ಷ ಸಂಘಟನೆಗೆ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಶ್ರಮ ವಹಿಸಿದೆ. ಭಾರತ್ ಜೋಡೋ ಯಾತ್ರೆಯ ಬಗ್ಗೆ ವರಿಷ್ಠರು ಹಿರಿಯೂರನ್ನ ನೆನೆಯುತ್ತಾರೆ. ಸದಸ್ಯತ್ವ ನೊಂದಣಿಯಲ್ಲಿ ಮಿಂಚೂಣಿಯಲ್ಲಿದ್ದು ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತಿದ್ದು ಸಚಿವರು ಜಿಲ್ಲೆಗೆ ಹೆಚ್ಚಿನ ಅನುದಾನ ತರಬೇಕು ಮುಂಬರುವ ದಿನಗಳಲ್ಲಿ ಜಿಪಂ, ತಾಪಂ ನಗರಸಭೆ ಚುನಾವಣೆಗಳು ಬರಲಿವೆ ಎಂದು ಅವರು ತಿಳಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾ ನಾಗಕುಮಾರ್ ಮಾತನಾಡಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ನಮ್ಮ ಪಕ್ಷಕ್ಕೆ ಓಟು ಹಾಕದಿದ್ದವರು ಕೂಡ ಪಡೆಯುತ್ತಿದ್ದು ಅದು ನಮ್ಮ ಪಕ್ಷದ ಸಾಧನೆಯಾಗಿದೆ ಎಂದರು.
ಮಾಜಿ ಜಿ ಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿ ಕಾರ್ಯಕರ್ತರ ಪರಿಶ್ರಮ ಅರಿಯಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟು ಬಂದಿವೆ. ಇದಕ್ಕೆ ಮಹಿಳೆಯರ ಶ್ರಮ ಇದೆ. ಮಹಿಳಾ ಸಬಲೀಕಲಣಕ್ಕೆ ಸರ್ಕಾರ ಸಾಕಷ್ಟು ಒತ್ತು ಕೊಟ್ಚಿದೆ. ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಸರ್ಕಾರ ಕ್ಷೇತ್ರದ ಅಭಿವೃದ್ದಿಗೆ ಒತ್ತು ಕೊಡಬೇಕು. ಶ್ರಮ ಪಟ್ಟ ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು. ಪಕ್ಷದ ಯಶಸ್ಸಿಗೆ ಅವರ ಶ್ರಮ ಮರೆಯದಿರಿ ಎಂದು ಶಶಿಕಲಾ ಎಚ್ಚರಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ವಿಜಯ್ ಕುಮಾರ್ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ. ಕಾರ್ಯಕರ್ತರ ನಂಬಿಕೆಗೆ ನಾಯಕರು ಅರ್ಹರಾಗಿರಬೇಕು. ಸಹಕಾರ ಶಕ್ತಿ ಕೊಡಬಲ್ಲ ಕಾರ್ಯಕರ್ತರ ಪಡೆ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಣಬಹುದು. ಕೇಂದ್ರದ ಬಿಜೆಪಿ ಸರ್ಕಾರ ನಮ್ಮ ಪಾಲಿನ ಜಿಎಸ್ ಟಿ ಕೊಡುತ್ತಿಲ್ಲ ಸಂವಿಧಾನ ಬದ್ದ ಹಕ್ಕುಗಳನ್ನು ಬಿಜೆಪಿ ಬುಡಮೇಲು ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಭುತ್ವದಲ್ಲಿ ಹಕ್ಕುಗಳನ್ನು ಬಿಜೆಪಿ ಕಸಿಯುತ್ತಿದೆ ದೇಶದ ಪ್ರಭುತ್ವವನ್ನು ರಕ್ಷಿಸಲು ಕಾಂಗ್ರೆಸ್ಸಿನ ಕಾರ್ಯಕರ್ತರು ಕಂಕಣ ಬದ್ದರಾಗಿರಬೇಕು ಎಂದು ಕರೆ ನೀಡಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿ ಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ ಖಾದಿ ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ನಗರಸಭೆ ಅಧ್ಯಕ್ಷ ಜೆ.ಆರ್ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಮಾಜಿ ನಗರಸಭೆ ಅಧ್ಯಕ್ಷೆ, ಹಾಲಿ ಸದಸ್ಯೆ ಶಿವರಂಜನಿ ಯಾದವ್, ಮಾಜಿ ತಾಪಂ ಅಧ್ಯಕ್ಷೆ ಡಾ.ಜೆ.ಆರ್ ಸುಜಾತ, ನಗರಸಭೆ ಸದಸ್ಯ ವಿ ಶಿವಕುಮಾರ್, ಪಿಲಾಲಿ ಮಂಜು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. 

 

 

Share This Article
error: Content is protected !!
";