ಕರಾವಳಿ ಕೊಲೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲಿಲ್ಲದ ಕಾಳಜಿ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರಾವಳಿ ಭಾಗ ಸೇರಿ ರಾಜ್ಯದ ಉದ್ದಗಲಕ್ಕೂ ನಿರಂತರ ಧಾರಾಕಾರ ಮಳೆ ಜನಜೀವನವನ್ನು ಛಿದ್ರಗೊಳಿಸಿದೆ. ಜನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ರಾಜ್ಯ ಕರ್ನಾಟಕ ಕಾಂಗ್ರೆಸ್ ಸರಕಾರ, ಕರಾವಳಿಗರ ಕಣ್ಣೀರು ಒರೆಸುವ ಬದಲು ಅವರ ಕಣ್ಣಲ್ಲಿ ‘ರಕ್ತಕಣ್ಣೀರು’ ಸುರಿಯಲಿ ಎಂದು ಹಪಾಹಪಿಸುತ್ತಿದೆ! ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರ್ ಸ್ವಾಮಿ ವಾಗ್ದಾಳಿ ನಡೆಸಿದರು.
ಮನೆ, ರಸ್ತೆ, ಸೇತುವೆಗಳು ಕುಸಿದಿವೆ. ನಗರ, ಪಟ್ಟಣ, ಹಳ್ಳಿಗಳು ಜಲದಿಗ್ಬಂಧನಕ್ಕೆ ಸಿಲುಕಿ ಜನ ವಿಲವಿಲವೆನ್ನುತ್ತಿದ್ದಾರೆ. ಮೂರಾಬಟ್ಟೆಯಾಗಿರುವ ಅವರ ಬದುಕಿನ ರಕ್ಷಣೆಗೆ ಸರಕಾರದ ಕ್ರಮವೇನು?
‘ಕೋಟೆ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಬಡಿದುಕೊಂಡರು’ ಎನ್ನುವಂತೆ ಮಳೆಯಲ್ಲಿ ಬದುಕು ಕೊಚ್ಚಿಹೋದ ಮೇಲೆ ಸಚಿವರಿಗೆ ಹೋಗಿ ಎಂದು ಮುಖ್ಯಮಂತ್ರಿ ಅಪ್ಪಣೆ ಕೊಟ್ಟರೆ ಫಲವೇನು? ಮಳೆ ಬರುವ ಮೊದಲು ಏನು ಮಾಡಿದ್ದೀರಿ? ಇದೇನಾ ಜನಪರ ಆಡಳಿತ? ನುಡಿದಂತೆ ನಡೆಯುವುದು ಎಂದರೆ ಹೀಗೆನಾ?
ಕಾಂಗ್ರೆಸ್ ಸರಕಾರಕ್ಕೆ ಕರಾವಳಿ ಮಳೆ ಬಗ್ಗೆ ಚಿಂತೆ ಇಲ್ಲ. ಆದರೆ, ಕರಾವಳಿ ಕೊಲೆಗಳ ಬಗ್ಗೆ ಎಲ್ಲಿಲ್ಲದ ಕಾಳಜಿ. ಆ ಕಾಳಜಿ ಕೊಲೆಗಳನ್ನು ಹತ್ತಿಕ್ಕಲಿಕ್ಕಲ್ಲ, ಕೊಲೆಗಳಲ್ಲೂ ‘ರಾಜಕೀಯ ಕೂಳು’ ಬೇಯಿಸಿಕೊಳ್ಳಲು!
ಸಿದ್ದರಾಮಯ್ಯ ನವರೇ, ಎರಡು ವರ್ಷದಿಂದ ಅಧಿಕಾರದಲ್ಲಿದ್ದೀರಿ. ಅನ್ಯಪಕ್ಷಗಳನ್ನು ದೂರುತ್ತಾ ಕಾಲಹರಣ ಮಾಡುತ್ತಿದ್ದೀರಿ. ನೀವು ಅಧಿಕಾರಕ್ಕೆ ಬಂದ ಮೇಲೆ ಕರಾವಳಿ ಭಾಗದಲ್ಲಿ ಎಷ್ಟು ಹತ್ಯೆಗಳಾದವು? ಅವನ್ನು ಹತ್ತಿಕ್ಕಲಿಲ್ಲ ಯಾಕೆ? ಒಂದು ಸಮುದಾಯ ನಿಮ್ಮ ಪಕ್ಷಕ್ಕೆ ನೂರಕ್ಕೆ ನೂರರಷ್ಟು ವೋಟು ಕೊಟ್ಟಿದೆಯಲ್ಲವೇ? ಅವರನ್ನು ರಕ್ಷಿಸಲು ವಿಫಲರಾಗಿರುವ ನೀವು, ಇತರೆ ಕೋಮುಗಳ ಮೇಲೆ ವಿಷ ಕಕ್ಕುತ್ತಿದ್ದೀರಿ!!
ಸರ್ವ ಜನಾಂಗದ ಶಾಂತಿಯ ತೋಟವನ್ನು ವಿಷ ಸರ್ಪಗಳ ತೋಟವನ್ನಾಗಿ ಪರಿವರ್ತಿಸಿದ್ದೀರಿ!
ಸಿದ್ದರಾಮಯ್ಯನವರೇ, ನೀವೂ ಮತ್ತು ನಿಮ್ಮ ಸಂಗಡಿಗರ ಸದಾರಮೆ ಸಾಕು. ಕೂಡಲೇ ಕರಾವಳಿಗೆ ಭೇಟಿ ನೀಡಿ. ಮಳೆ, ಕೊಲೆಗಳಿಂದ ತತ್ತರಿಸಿರುವ ಅಲ್ಲಿನ ಜನತೆಗೆ ಧೈರ್ಯ ತುಂಬಿ. ಪ್ರಕೃತಿ ಪ್ರೇರಿತ ಮಳೆ ವಿಕೋಪ, ನಿಮ್ಮ ಪಕ್ಷ ಪ್ರೇಷಿತ ‘ಕೊಲೆ ವಿಕೋಪ’ಕ್ಕೆ ಪರಿಹಾರ ಕಂಡುಕೊಳ್ಳಿ. ಮುಖ್ಯಮಂತ್ರಿಯಾಗಿ ಇದು ನಿಮ್ಮ ತಕ್ಷಣದ ಕರ್ತವ್ಯ ಎಂದುಕೇಂದ್ರ ಸಚಿವ ಹೆಚ್.ಡಿ ಕುಮಾರ್ ಸ್ವಾಮಿ ಸಲಹೆ ನೀಡಿದರು.

