ಗರ್ಭಿಣಿ, ಬಾಣಂತಿಯರು ಮತ್ತು ಕಿಶೋರಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು-ಸಣ್ಣರಂಗಮ್ಮ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗರ್ಭಿಣಿ ಬಾಣಂತಿಯರು ಮತ್ತು ಕಿಶೋರಿಯರು ಪೌಷ್ಟಿಕ ಆಹಾರದ ಸೇವನೆ ಮಾಡುವುದರ ಜೊತೆಯಲ್ಲಿ ಸ್ವಯಂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದರೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಲು ಸಾಧ್ಯವಿದೆ ಎಂದು ಜಿಲ್ಲಾ ಪೌಷ್ಟಿಕ ಆಹಾರ ಮೇಲ್ವಿಚಾರಕಿ ಸಣ್ಣ ರಂಗಮ್ಮ ತಿಳಿಸಿದರು.

ಹಿರಿಯೂರು ವೇದವತಿ ನಗರದ ನಗರ ಆರೋಗ್ಯಕೇಂದ್ರದ ಉಪ ಕೇಂದ್ರದಲ್ಲಿ  ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕುಟುಂಬ ಕಲ್ಯಾಣ ವಿಧಾನಗಳು, ಒಆರ್ ಎಸ್ ಜಿಂಕ್ ಕಾರ್ಯಕ್ರಮ ಮತ್ತು ಅಂಗನವಾಡಿಗೆ ಪೌಷ್ಟಿಕ ಆಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

- Advertisement - 

ಗರ್ಭಿಣಿಯರು, ಬಾಣಂತಿಯರು ಮತ್ತು ಹದಿಹರೆಯದ ಹುಡುಗಿಯರಿಗೆ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ಈ ಮೂರು ಗುಂಪಿನ ಮಹಿಳೆಯರಿಗೆ ಪ್ರತ್ಯೇಕವಾಗಿ ಪೌಷ್ಟಿಕ ಆಹಾರದ ಅವಶ್ಯಕತೆಗಳಿರುತ್ತವೆ. ಗರ್ಭಿಣಿಯರಿಗೆ ಹೆಚ್ಚು ಕ್ಯಾಲೋರಿಗಳು ಮತ್ತು ಪೋಷಕಾಂಶಗಳು ಬೇಕಾಗುತ್ತವೆ. ಬಾಣಂತಿಯರಿಗೆ ಎದೆಹಾಲು ಉತ್ಪಾದನೆಗಾಗಿ ಹೆಚ್ಚಿನ ಪೋಷಕಾಂಶಗಳು ಬೇಕಾಗುತ್ತವೆ ಮತ್ತು ಹದಿಹರೆಯದ ಹುಡುಗಿಯರಿಗೆ ಬೆಳವಣಿಗೆಗಾಗಿ ಪೌಷ್ಟಿಕ ಆಹಾರ ಅಗತ್ಯ ಎಂದು ಅವರು ತಿಳಿಸಿದರು.

ಫೋಲಿಕ್ ಆಮ್ಲವು ನರ ಕೊಳವೆಯ ದೋಷಗಳನ್ನು ತಡೆಯುತ್ತದೆ ಮತ್ತು ಭ್ರೂಣದ ಬೆಳವಣಿಗೆಗೆ ಅನುಕೂಲ ಮಾಡಲಿದೆ. ಹಸಿರು ತರಕಾರಿಗಳು, ಮೊಳಕೆ ಕಟ್ಟಿದ ಧಾನ್ಯಗಳು ಮತ್ತು ಬೇಳೆಕಾಳುಗಳಲ್ಲಿ ಫೋಲಿಕ್ ಆಮ್ಲ ಹೇರಳವಾಗಿರುತ್ತದೆ ಇವುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು ಎಂದು ತಿಳಿಸಿದರು.

- Advertisement - 

ಭ್ರೂಣದ ಬೆಳವಣಿಗೆಗೆ ಪ್ರೋಟೀನ್ ಅಗತ್ಯ. ಮಾಂಸ, ಮೀನು, ಮೊಟ್ಟೆ, ಬೇಳೆಕಾಳುಗಳು ಮತ್ತು ಡೈರಿ ಉತ್ಪನ್ನಗಳಲ್ಲಿ ಪ್ರೋಟೀನ್ ಹೇರಳವಾಗಿರುತ್ತದೆ ಎಂದು ಸಣ್ಣರಂಗಮ್ಮ ಅವರು ತಿಳಿಸಿದರು.

ಕುಟುಂಬ ಕಲ್ಯಾಣ ಇಲಾಖೆಯ ತಾತ್ಕಾಲಿಕ ಮತ್ತು ಶಾಶ್ವತಗಳ ಯೋಜನೆಗಳ ಬಗ್ಗೆ ತಾಯಂದಿರಿಗೆ ಅರಿವು ಮೂಡಿಸಿದರು. ಭಾರತ ದೇಶ ಬಡತನದಿಂದ ಕೂಡಿರುವುದು ಹೆಚ್ಚುತ್ತಿರುವ ಜನಸಂಖ್ಯೆ ಕಾರಣವಾಗಿದೆ. ಅದಕ್ಕಾಗಿ ಮನೆಗೊಂದು ಮಗು ಮನೆ ತುಂಬಾ ನಗು ಎಂಬ ನಾಣ್ಣುಡಿಯನ್ನು ಜನರಿಗೆ ತಿಳಿಸುವ ಮೂಲಕ ಆ ನಾಣ್ಣುಡಿಯಂತೆ ನಡೆದುಕೊಳ್ಳಬೇಕು ಎಂದು ಸಣ್ಣರಂಗಮ್ಮ ಮನವಿ ಮಾಡಿದರು.

ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸೌಮ್ಯ ಮಾತನಾಡಿ ಎದೆಹಾಲು ಉತ್ಪಾದನೆಗಾಗಿ ಹೆಚ್ಚಿನ ಕ್ಯಾಲೋರಿಗಳು ಬೇಕಾಗುತ್ತವೆ. ಸ್ನಾಯುಗಳನ್ನು ಸರಿಪಡಿಸಲು ಮತ್ತು ಎದೆಹಾಲು ಉತ್ಪಾದಿಸಲು ಪ್ರೋಟೀನ್ ಅವಶ್ಯಕ. ಸಾಕಷ್ಟು ನೀರು ಕುಡಿಯುವುದು ಮತ್ತು ದ್ರವ ಪದಾರ್ಥಗಳನ್ನು ಸೇವಿಸುವುದು ಮುಖ್ಯ. ಸೊಪ್ಪು ಮತ್ತು ತರಕಾರಿಗಳಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹೆಚ್ಚಾಗಿರುತ್ತದೆ ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂದು ತಿಳಿಸಿದರು.

ಆಹಾರದಲ್ಲಿ ವಿವಿಧ ರೀತಿಯ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್ ಇರುವಂತ ಆಹಾರ ಸೇವನೆ ಮಾಡುವುದು ಮುಖ್ಯ ಎಂದರು. ಸಂಸ್ಕರಿಸಿದ ಆಹಾರ, ಸಕ್ಕರೆ ಮತ್ತು ಜಂಕ್ ಫುಡ್ ಗಳನ್ನು ತಿನ್ನಲು ಹೋಗಬೇಡಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಎಂದು ಅವರು ಕರೆ ನೀಡಿದರು.

ವೇದಾವತಿ ನಗರದ ಅಂಗನವಾಡಿ ಕಾರ್ಯಕರ್ತೆ ಅನಿತಾ ಅರುಣ್ ಕುಮಾರ್, ಆಶಾ ಕಾರ್ಯಕರ್ತೆ ನಳಿನ, ಅಂಗನವಾಡಿ ಸಹಾಯಕಿ ಅನುಪಮಾ ಸೇರಿದಂತೆ ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದರು.

Share This Article
error: Content is protected !!
";