ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಂಬರುವ ಆಗಸ್ಟ್- ಅಕ್ಟೋಬರ್ ಒಳಗೆ ಕ್ರಾಂತಿ ಆಗುತ್ತೆ ಎಂದು ಮುಖ್ಯಮಂತ್ರಿಗಳ ಆಪ್ತರೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆಯೋ ಗೊತ್ತಿಲ್ಲ. ಮಾಧ್ಯಮದಲ್ಲಿ ಬಂದಿರುವುದನ್ನಷ್ಟೇ ಗಮನಿಸಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ತಿಂಗಳಲ್ಲಿ ಬದಲಾವಣೆ ಆಗುತ್ತದೆ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿ ಕ್ರಾಂತಿ ನಡೆಯುತ್ತದೆ ಎಂದು ಹೇಳಿದ್ದಾರೆ. ಅದು ಕ್ರಾಂತಿಯೋ ಏನೋ ನನಗೆ ಗೊತ್ತಿಲ್ಲ. ಅದು ಏನು ಎಂಬುದನ್ನು ರಾಜಣ್ಣ ಅಥವಾ ಸಿಎಂ ಅವರೇ ಹೇಳಬೇಕು. ಅವರ ಪಕ್ಷದ ಬೆಳವಣಿಗೆ ಬಗ್ಗೆ ನನಗೆ ಹೇಗೆ ಗೊತ್ತಾಗಲಿದೆ? ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಇಂಥ ದಾರುಣ ಘಟನೆ ನಡೆಯಬಾರದಿತ್ತು. ಇದು ರಾಜ್ಯಕ್ಕೆ ಕಪ್ಪುಚುಕ್ಕೆ. ಹುಲಿಗಳು ಯಾವ ಕಾರಣಕ್ಕೆ ಸತ್ತಿವೆ ಎಂಬ ಮಾಹಿತಿ ಇಲ್ಲ. ಈ ಬಗ್ಗೆ ವಿಸ್ತೃತ ತನಿಖೆ ಆಗಿ ಏನಾಗಿದೆ ಎನ್ನುವ ಮಾಹಿತಿ ಹೊರ ಬರಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ಸೌಹಾರ್ದ ಭೇಟಿಯಷ್ಟೇ: ಬಿಜೆಪಿ ಮುಖಂಡ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಭೇಟಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ದೆಹಲಿಯ ನನ್ನ ಮನೆಗೆ ಅಶೋಕ್ ಬಂದಿದ್ದರು. ನಾವು ಅವರು ಅಣ್ಣತಮ್ಮಂದಿರು. ರಾಜಕೀಯವಾಗಿ ಯಾವುದೇ ಚರ್ಚೆಯಾಗಿಲ್ಲ. ದೆಹಲಿಯಲ್ಲಿ ಹೊಸದಾಗಿ ಸರ್ಕಾರಿ ನಿವಾಸಕ್ಕೆ ನಾನು ಸ್ಥಳಾಂತರಗೊಂಡಿದ್ದೇನೆ. ಮೊದಲ ಬಾರಿಗೆ ಅವರು ಬಂದಿದ್ದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರ ವಿಷಯ ನನಗೇನೂ ಗೊತ್ತಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಮುಂದುವರೆದು ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ ಮತ್ತು ಅಪ್ರತಿಮ ಆಡಳಿತಗಾರರಷ್ಟೇ ಆಗಿರಲಿಲ್ಲ, ಅವರೊಬ್ಬರು ಅನನ್ಯ ದಾರ್ಶನಿಕರು, ಶಾಂತಿಪ್ರಿಯರು, ಸರ್ವಜನರ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಮಾನವತಾವಾದಿ ಎಂದು ತಿಳಿಸಿದ ಅವರು ಅಂತಹ ಮಹಾನ್ ನಾಯಕನ್ನು ಅನುಕ್ಷಣವೂ ಸ್ಮರಿಸೋಣ ಎಂದು ತಿಳಿಸಿದರು.
ಅಭಿವೃದ್ಧಿ, ನೆಮ್ಮದಿ, ಸೌಹಾರ್ದತೆ, ನಗರಾಭಿವೃದ್ಧಿ, ನೀರಾವರಿ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾಡಪ್ರಭುಗಳು ಹಾಕಿಕೊಟ್ಟ ದೂರದೃಷ್ಟಿಯ ಹಾದಿ ನಮಗೆಲ್ಲರಿಗೂ ಮಾದರಿ, ಪ್ರೇರಣೆ. ವಿಜ್ಞಾನ, ತಂತ್ರಜ್ಞಾನ, ಅವಿಷ್ಕಾರ, ಕೈಗಾರಿಕೆ, ಉದ್ಯೋಗಾವಕಾಶ ಸೇರಿ ಅನೇಕ ರೀತಿಯಲ್ಲಿ ಜಗತ್ತಿನ ಮುಂಚೂಣಿ ನಗರವಾಗಿರುವ ಬೆಂಗಳೂರಿನ ಭವ್ಯ ಪರಂಪರೆಯನ್ನು ಮುಂದುವರಿಸೋಣ ಎಂದು ಹೇಳಿದ್ದಾರೆ.

