ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸ್ನಾತಕೋತ್ತರ ಪದವಿ ಮತ್ತು 300 ಹಾಸಿಗೆ ಸಾಮರ್ಥ್ಯದ “Poly trauma centre” ಸ್ಥಾಪನೆಯ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಅನುಮೋದನೆ ನೀಡಿರುವುದು ವೈಯುಕ್ತಿಕವಾಗಿ ಅತ್ಯಂತ ಸಂತಸ ತರಿಸಿದೆ. ಈ ಮೂಲಕ ಅನೇಕ ವರ್ಷಗಳ ಕನ್ನಡಿಗರ ಬೇಡಿಕೆ ಈಡೇರಿದಂತಾಗಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ಬಹುದಿನಗಳ ಕನಸು ಈಡೇರಿಸಿದ ಕೇಂದ್ರ ಸರ್ಕಾರಕ್ಕೆ ಸಂಸದರು ಧನ್ಯವಾದಗಳನ್ನು ಇದೇ ಸಂದರ್ಭದಲ್ಲಿ ಸಲ್ಲಿಸಿದ್ದಾರೆ.
ಈ ಬಗ್ಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಕೇಂದ್ರ ಹಣಕಾಸು ಸಚಿವರಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ಮತ್ತು ವೈಯುಕ್ತಿಕವಾಗಿ ಭೇಟಿಯಾಗಿ ಮನವಿ ಸಲ್ಲಿಸಿದ್ದರಿಂದಾಗಿ ಕೇಂದ್ರ ಸರ್ಕಾರ ಇಂದು ಯೋಜನೆ ಮಂಜೂರು ಮಾಡಿದೆ ಎಂದು ಸಂಸದರು ತಿಳಿಸಿದರು.
ಪ್ರಸ್ತುತ ನಮ್ಮ ದೇಶದಲ್ಲಿ ಶೇ 15 % ರಷ್ಟು ಸಾವುಗಳು ರಸ್ತೆ ಅಪಘಾತದಿಂದ ಸಂಭವಿಸುತ್ತಿವೆ ಮತ್ತು ಶೇ 30 ರಷ್ಟು ರಸ್ತೆ ಅಪಘಾತಗಳಲ್ಲಿ ಬಹುಗಾಯಗಳಿಗೆ( multiple injuries) ಒಳಗಾಗುತ್ತಾರೆ.
ಈ ಹಿನ್ನಲೆ ಗಾಯಗೊಂಡವರಿಗೆ ಆದಷ್ಟು ತ್ವರಿತವಾಗಿ (golden hour) ಒಂದೇ ಸೂರಿನಡಿ ಚಿಕಿತ್ಸೆ ಒದಗಿಸುವ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ಜನತೆಗೆ ವಿಶೇಷವಾಗಿ ಬೆಂಗಳೂರಿಗರಿಗೆ “Poly trauma centre” ಸ್ಥಾಪನೆ ಅತ್ಯಂತ ಸಹಕಾರಿಯಾಗಲಿದೆ ಎಂದು ಡಾ.ಮಂಜುನಾಥ್ ಹೇಳಿದರು.
ಜಯಪ್ರಕಾಶ್ ನಾರಾಯಣ್ “Poly trauma centre” ನಂತರದಲ್ಲಿ ದೇಶದಲ್ಲಿಯೇ ಎರಡನೇ “Poly trauma centre” ಇದಾಗಲಿದೆ. ಇದರ ಜೊತೆಗೆ ಸ್ನಾತಕೋತ್ತರ ಪದವಿ ಘಟಕವನ್ನು ಸ್ಥಾಪಿಸುವುದರಿಂದ ಆಘಾತ ಚಿಕಿತ್ಸಾ ವಿಭಾಗದಲ್ಲಿ ತಜ್ಞರಿಗೆ ನುರಿತ ತರಬೇತಿ ನೀಡುವ ಮೂಲಕ ಅವರ ಸೇವೆಯನ್ನು ದೇಶಾದ್ಯಂತ ಬಳಸಿಕೊಳ್ಳಬಹುದಾಗಿದೆ.
ನಮ್ಮೆಲ್ಲರ ಮನವಿಗೆ ಸ್ಪಂದಿಸಿ ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸ್ನಾತಕೋತ್ತರ ಪದವಿ ಮತ್ತು 300 ಹಾಸಿಗೆ ಸಾಮರ್ಥ್ಯದ “Poly centre” ಸ್ಥಾಪನೆಯ ಪ್ರಸ್ತಾವನೆಗೆ ಅನುಮೋದನೆ ನೀಡಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜೆ.ಪಿ ನಡ್ಡಾ ಅವರಿಗೆ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕರ್ನಾಟಕ ಜನತೆಯ ಪರವಾಗಿ ಸಂಸದ ಡಾ.ಮಂಜುನಾಥ್ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

