ಭೀಕರ ರಸ್ತೆ ಅಪಘಾತ, ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ತುಮಕೂರು:
ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ಜರುಗಿದೆ.

ಕುಣಿಗಲ್- ಬಿದನಗೆರೆ ಬೈಪಾಸ್‌ನಲ್ಲಿ ಅತೀ ವೇಗವಾಗಿ ಬಂದ ಕ್ಯಾಂಟರ್ ವಾಹನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರು ಸೇರಿದಂತೆ ಕುಟುಂಬದ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

- Advertisement - 

ಮೂಲತಃ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದವರಾದ ಸೀಬೇಗೌಡ (48) ಅವರ ಪತ್ನಿ ಶೋಭಾ (42) ಮಗಳು ದುಂಬಿ (16) ಮಗ ಭಾನು ಕಿರಣ್ ಗೌಡ (14) ಮೃತ ದುರ್ದೈವಿಗಳಾಗಿದ್ದಾರೆ.
ಮಾಗಡಿ ಪಟ್ಟಣದ ನಟರಾಜ ಬಡಾವಣೆಯಲ್ಲಿ ಸೀಬೇಗೌಡ ಕುಟುಂಬ ವಾಸವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸೀಬೇಗೌಡ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದು, ಹಿರಿಯ ಮಗಳಿಗೆ ಮದುವೆ ಮಾಡಲಾಗಿದೆ. ಮಗ ಭಾನುಕಿರಣ್ ಗೌಡ ಕುಣಿಗಲ್ ಬಳಿಯಿರುವ ಅರವಿಂದ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದನು. ಶನಿವಾರ ಶಾಲೆ ಮುಗಿಸಿ ಭಾನುಕಿರಣ್‌ ಗೌಡ ಮಾಗಡಿಗೆ ಬಂದಿದ್ದನು. ಹಾಗಾಗಿ ಭಾನುವಾರ ರಾತ್ರಿ ಮಗನನ್ನು ಶಾಲೆಯ ವಸತಿ ನಿಲಯಕ್ಕೆ ಬಿಟ್ಟು ಬರಲು ಸೀಬೇಗೌಡ ಅವರು ಕಾರಿನಲ್ಲಿ ಕುಟುಂಬ ಸಮೇತ ಆಗಮಿಸಿದ್ದರು.

- Advertisement - 

ಕುಣಿಗಲ್‌ ಬೈಪಾಸ್‌ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಕಾರನ್ನು ಯುಟರ್ನ್ ತೆಗೆದುಕೊಳ್ಳುವಾಗ ಹಾಸನದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ವಾಹನ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಕುಣಿಗಲ್ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ನವೀನ್ ಗೌಡ ಮತ್ತು ಅವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಪಘಾತದ ಸುದ್ದಿ ತಿಳಿದು ಆಸ್ಪತ್ರೆ ಬಳಿ ದೌಡಾಯಿಸಿದ್ದ ಸೀಬೇಗೌಡರ ಮತ್ತೊಬ್ಬ ಮಗಳು ಹಾಗೂ ಸಂಬಂಧಿಕರು, ಕುಟುಂಬ ಸದಸ್ಯರ ರೋಧನ ಮುಗಿಲುಮುಟ್ಟಿತ್ತು. ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರಾಗಿದ್ದ ಸೀಬೇಗೌಡ ಅವರು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣಗೌಡ ರವರ ಅಪ್ತರಾಗಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಸೀಬೇಗೌಡ ಅವರ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಶಾಸಕ ಬಾಲಕೃಷ್ಣ, ಪುರಸಭೆ ಸದಸ್ಯ ಪುರುಷೋತ್ತಮ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು, ಆಸ್ಪತ್ರೆ ಬಳಿ ಆಗಮಿಸಿ ಕುಟುಂಬದವರಿಗೆ ಧೈರ್ಯ ಹೇಳಿದರು.

 

 

Share This Article
error: Content is protected !!
";