ಚಂದ್ರವಳ್ಳಿ ನ್ಯೂಸ್, ಅಹಮದಾಬಾದ್:
ಗುಜರಾತ್ ರಾಜ್ಯದ ವಡೋದರಾ ಜಿಲ್ಲೆಯ ಮುಜ್‌ಪುರ ಬಳಿಯ ನಾಲ್ಕು ದಶಕಗಳಷ್ಟು ಹಳೆಯದಾದ ಗಂಭೀರಾ ಸೇತುವೆಯ ಒಂದು ಭಾಗ ಬುಧವಾರ ಕುಸಿದು ಬಿದ್ದ ಪರಿಣಾಮ ಹಲವಾರು ವಾಹನಗಳು ನದಿಗೆ ಬಿದ್ದು, ಕನಿಷ್ಠ ಒಂಬತ್ತು ಜನರು ಮೃತಪಟ್ಟಿರುವ ಘಟನೆ ಜರುಗಿದೆ. ಸಾವಿನ ಸಂಖ್ಯೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸೇತುವೆ ಕುಸಿತದಲ್ಲಿ 5 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಕಾಏಕಿ ಸೇತುವೆ ಕುಸಿದು ಬಿದ್ದ ಪರಿಣಾಮ ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನ ನದಿಗೆ ಬಿದ್ದಿವೆ. ಕೆಲವೇ ನಿಮಿಷಗಳಲ್ಲಿ, ಗ್ರಾಮಸ್ಥರು ಸುದ್ದಿ ಮುಟ್ಟಿಸಿ ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಐವರನ್ನು ರಕ್ಷಿಸಿ ಮೇಲೆತ್ತಿದರು.
ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ಭಾಗಗಳನ್ನು ಸಂಪರ್ಕಿಸುವ ನದಿಯಲ್ಲಿ ಗಂಭೀರಾ ಸೇತುವೆಯ ಸ್ಲ್ಯಾಬ್ ಕುಸಿದು ಐದಾರು ವಾಹನಗಳು ಮಹಿಸಾಗರ್ ನದಿಗೆ ಬಿದ್ದವು ಎಂದು ಗುಜರಾತ್ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ತಿಳಿಸಿದ್ದಾರೆ.
ಕುಸಿದು ಬಿದ್ದಿರುವ ಸೇತುವೆಯನ್ನು 1985 ರಲ್ಲಿ ನಿರ್ಮಿಸಲಾಗಿತ್ತು. ಸ್ಥಳೀಯರ ಪ್ರಕಾರ ಗಂಭೀರಾ ಸೇತುವೆ ಬಹಳ ಹಿಂದಿನಿಂದಲೂ ಅಪಾಯಕಾರಿ ಶಿಥಿಲಾವಸ್ಥೆಯಲ್ಲಿತ್ತು. ಸ್ಥಳೀಯರು ಅದರ ಶಿಥಿಲಾವಸ್ಥೆಯ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿ ತುರ್ತು ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣಕ್ಕೆ ಮನವಿ ಮಾಡುತ್ತಿದ್ದರು, ಆದರೆ ಅವರ ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ದಿಢೀರ್ ಸೇತುವೆ ಕುಸಿತದಿಂದಾಗಿ ಆನಂದ್, ವಡೋದರಾ, ಭರೂಚ್ ಮತ್ತು ಅಂಕಲೇಶ್ವರವನ್ನು ಸೌರಾಷ್ಟ್ರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳು ಕಡಿದುಹಾಕಿದೆ. ಪ್ರಾದೇಶಿಕ ಸಾರಿಗೆ ಮತ್ತು ವಾಣಿಜ್ಯ ಸಾರಿಗೆ ಸಂಚಾರವನ್ನು ನಿಷ್ಕ್ರಿಯಗೊಳಿಸಿದೆ.
ಘಟನೆಯ ಹಿಂದಿನ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಾಂತ್ರಿಕ ತಜ್ಞರನ್ನು ಸ್ಥಳಕ್ಕೆ ಕಳುಹಿಸಿ ಸೇತುವೆ ಕುಸಿತಕ್ಕೆ ನಿಖರ ಕಾರಣ ಪತ್ತೆ ಮಾಡಿ ವರದಿ ನೀಡಲು ನಿರ್ದೇಶಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಂಡವು ರಕ್ಷಣಾ ಸಾಧನಗಳೊಂದಿಗೆ ಘಟನಾ ಸ್ಥಳಕ್ಕೆ ತೆರಳಿದೆ.

