ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿದ್ಯಾರ್ಥಿಗಳಲ್ಲಿ ಚುನಾವಣೆ ಪ್ರಕ್ರಿಯೆ ಪರಿಕಲ್ಪನೆ ಮೂಡಿಸುವುದು ಅಗತ್ಯ ಎಂದು ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಕೆ.ಜಿ.ಪ್ರಶಾಂತ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಗುಡ್ಡದ ರಂಗವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆ ವೀಕ್ಷಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಚುನಾವಣೆ ಪ್ರಕ್ರಿಯೆ, ಮತದಾನ, ಮತಎಣಿಕೆ ವಿಧಾನ ತಿಳಿಯಲು ಶಾಲಾ ಸಂಸತ್ ಚುನಾವಣೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಪಠ್ಯ ವಿಷಯದ ಜತೆಗೆ ಇಲಾಖೆಯಿಂದ ಆಯೋಜಿಸುವ ಪ್ರಾಚ್ಯಪ್ರಜ್ಞೆ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.
ಡಯಟ್ ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಶಾಲಾ ಸಂಸತ್ ಚುನಾವಣೆ ವಿದ್ಯಾರ್ಥಿಗಳಿಗೆ ಮತದಾನ ಪ್ರಕ್ರಿಯೆಯ ನೈಜ ಅನುಭವ ನೀಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು 18 ವರ್ಷ ಪೂರ್ಣಗೊಂಡ ನಂತರ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹೆಸರನ್ನು ನೊಂದಣಿ ಮಾಡಿಕೊಳ್ಳಬೇಕು. ಪ್ರತಿಯೊಂದು ಮತವು ಅಮೂಲ್ಯವಾಗಿದ್ದು, ಶಾಲಾ ಸಂಸತ್ ಚುನಾವಣೆಯಲ್ಲಿ ಆಸಕ್ತಿಯಿಂದ ಭಾಗವಹಿಸಿದಂತೆ ಭವಿಷ್ಯದ ಚುನಾವಣೆ ಪ್ರಕ್ರಿಯೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂದರು.
ಮುಖ್ಯ ಶಿಕ್ಷಕ ಹೆಚ್.ಗೋವಿಂದಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಮತದಾನ ಪ್ರಕ್ರಿಯೆ ಪರಿಕಲ್ಪನೆ ಮೂಡಿಸಲು ಮತ ಪತ್ರಗಳ ಪರಿಚಯ, ಮತ ಚಲಾಯಿಸುವ ವಿಧಾನ ತಿಳಿಸಲು ಮತಗಟ್ಟೆ ನಿರ್ಮಿಸಿ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು. 15 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು ಅಧಿಕ ಮತಗಳನ್ನು ಪಡೆದ 9 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಶಾಲಾ ಸಂಸತ್‍ನ ಸಚಿವ ಸಂಪುಟ ರಚಿಸಲಾಗುವುದು ಎಂದರು.
ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕರಾದ ರಷೀದಾಬಾನು, ಡಾ.ಎಸ್.ಸವಿತ, ಕೆ.ಎಂ.ಆರ್.ಶೋಭ, ಬಿ.ಓಕವಿತ, ಎಚ್.ಕೆ. ಮಹೇಶ್, ಎಚ್.ಎನ್.ಮಂಜುನಾಥ್, ಎಂ.ಆರ್.ನಾಗರಾಜು, ಕಾರ್ಯ ನಿರ್ವಹಿಸಿದರು. ದ್ವಿತೀಯ ದರ್ಜೆ ಸಹಾಯಕ ಎಂ.ಎಸ್.ಕಿರಣ್‍ಕುಮಾರ್, ಎಸ್.ಆರ್.ಎಸ್ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

