ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಜೆಟ್ ಸಿಬಿಎಸ್‌ಸಿ ಶಾಲೆಯಲ್ಲಿ ಶನಿವಾರ ನಡೆದ ನಾಯಕತ್ವ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿ ಕೋಟೆಯವರು ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಶುಭ ಹಾರೈಸಿದರು.
ಹಿರಿಯೂರು ತಾಲೂಕು, ಗೊಲ್ಲಹಳ್ಳಿಯ ಜಟ್ ಸಿಬಿಸಿ ಶಾಲೆಯಲ್ಲಿ ನಡೆದ ನಾಯಕತ್ವ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಮಕ್ಕಳಿಗೆ ಶಾಲೆಯ ಧ್ವಜ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಜಾಗೃತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಬೆಳಗೆರೆ, ಕಾರ್ಯದರ್ಶಿ ಗಿರಿಜಾ ಮತ್ತು ಶಾಲೆಯ ಪ್ರಾಮುಖ್ಯಪಾಲ ಷಣ್ಮುಖ ಸುಂದರಂ ಈ ಸಂದರ್ಭದಲ್ಲಿ ಇದ್ದರು.
ಗ್ರಾಮೀಣ ಮಕ್ಕಳು ಆಧುನಿಕ ಜ್ಞಾನವನ್ನು ಗಳಿಸಿಕೊಳ್ಳುವ ಜೊತೆಗೆ ರೂಢಿಗತವಾಗಿ ಬಂದ ಜಾನಪದ ಕಲೆಗಳನ್ನು ಕಲಿಯಬೇಕೆಂದು ಕರ್ನಾಟಕ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಕರೆ ನೀಡಿದ್ದಾರೆ.
ಅವರು ಶನಿವಾರ ಗೊಲ್ಲಹಳ್ಳಿಯ ಜೆಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರಿಗೆ ಅಧಿಕಾರ ಸ್ವೀಕಾರ ಮಾಡಿ ಮಾತನಾಡುತ್ತಿದ್ದರು. ನಮ್ಮ ಕಾಲದಲ್ಲಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ಣುಡಿ ಇತ್ತು ಆದರೆ ಬದಲಾಗುತ್ತಿರುವ ಈ ಕಾಲದಲ್ಲಿ ಇಂದಿನ ಮಕ್ಕಳೇ ಈಗಿನ ಪ್ರಜೆಗಳು ಎಂಬುವಷ್ಟು ಬದಲಾಗಿದೆ.
ಮಕ್ಕಳ ಕಲಿಕೆಯ ಗುಣಮಟ್ಟವೂ ಕೂಡ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಇದಕ್ಕೆ ತಕ್ಕಂತೆ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಜೆಟ್ ಸಿ.ಬಿ.ಎಸ್.ಇ ಶಾಲೆ ಗ್ರಾಮೀಣ ಬದುಕನ್ನೂ ಸಹ ಮಕ್ಕಳು ಮರೆಯದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ರುದ್ರಣ್ಣ ಹರ್ತಿಕೋಟೆಯವರು ತಮ್ಮ ಬಾಲ್ಯದ ಬದುಕನ್ನು ಸ್ಮರಿಸುವ ಮೂಲಕ ಮಕ್ಕಳಿಗೆ ಸ್ಪೂರ್ತಿಯ ಮಾತನ್ನು ಹೇಳಿದರು .
ಜಾಗೃತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಬೆಳೆಗೆರೆ ಮಾತನಾಡಿ ಗ್ರಾಮೀಣ ಮಕ್ಕಳು ಆಧುನಿಕ ಶಿಕ್ಷಣವನ್ನು ಸಮರ್ಥವಾಗಿ ಕಲಿತರೆ ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆ ಮತ್ತು ಬದಕನ್ನು ಮತ್ತಷ್ಟು ಸಮರ್ಥವಾಗಿ ರೂಪಿಸಿಕೊಳ್ಳಬಹುದುದೆಂದು ಅಭಿಪ್ರಾಯ ಪಟ್ಟರು.
ಪ್ರಾಂಶುಪಾಲ ಸುಂದರಂ ರವರು ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಉಪಪ್ರಾಂಶುಪಾಲ ಧನುಷ್ ಅವರು ರುದ್ರಣ್ಣ ಹರ್ತಿಕೋಟೆಯವರ ಸಾಧನೆಯ ಬದುಕನ್ನು ಪರಿಚಯ ಮಾಡಿಕೊಟ್ಟರು.
ಗಣಿತ ಶಿಕ್ಷಕ ಶಿವು ನರ್ವಾರ್ ಸ್ವಾಗತಿಸಿದರು. ಸುಧಾ ವಂದಿಸಿದರು. ಶಾಲಾ ಕ್ಯಾಪ್ಟನ್ ಕುಮಾರಿ ಪ್ರೇಕ್ಷಾ ಹಾಗೂ ಉಳಿದ ತಂಡದ ನಾಯಕರು ಸಭೆಯಲ್ಲಿ ಮಾತಾಡಿದರು.

