ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಲ್ಲಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ನ ನೇತೃತ್ವದಲ್ಲಿ ಜಿಲ್ಲೆ 317ಎಫ್ ಕ್ವೆಸ್ಟ್ ವಿಭಾಗದ ಸಹಯೋಗದಲ್ಲಿ ಲಯನ್ಸ್ ಕ್ವೆಸ್ಟ್ ಶಿಕ್ಷಕರ ತರಬೇತಿ 3ನೇ ಕಾರ್ಯಾಗಾರ ಶನಿವಾರ ಎಸ್ಡಿಯು ಪ್ರೌಢಶಾಲೆ ಸಭಾಂಗಣದಲ್ಲಿ ನಡೆಯಿತು. ಲಯನ್ಸ್ ಕ್ವೆಸ್ಟ್ ಮಲ್ಟಿಪಲ್ ಸಂಯೋಜಕ ಡಾ.ಎಸ್.ನಾಗರಾಜ್ರಾವ್ ಕಾರ್ಯಾಗಾರ ಉದ್ಘಾಟಿಸಿದರು.
ಅವರು ಮಾತನಾಡಿ, ಹದಿಹರೆಯದ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಧನಾತ್ಮಕ ಆಲೋಚನೆಗಳನ್ನು ರೂಢಿಸುವ ಮೂಲಕ ಸಶಕ್ತ ವ್ಯಕ್ತಿತ್ವಗಳ ನಿರ್ಮಾಣ ಇಂದಿನ ಅಗತ್ಯವಾಗಿದ್ದು, ಅದಕ್ಕೆ ಲಯನ್ಸ್ ಕ್ವೆಸ್ಟ್ ಪರಿಕಲ್ಪನೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ತರಬೇತುದಾರರಾಗಿ ಆಗಮಿಸಿದ್ದ ಕಲ್ಪನಾ ಮೋಹನ್ ಮಾತನಾಡಿ, ಹೊಸಪೀಳಿಗೆಯ ಆಲೋಚನೆಗಳನ್ನು ಪ್ರಭಾವಿಸುವ ನಿಟ್ಟಿನಲ್ಲಿ ಉತ್ಸಾಹಿ ಶಿಕ್ಷಕ ಬಳಗ ಗಣನೀಯವಾಗಿ ತೊಡಗಿಕೊಳ್ಳುವ ಚಿಂತನೆಯಲ್ಲಿರುವುದು ಅಭಿನಂದನೀಯ ಎಂದು ತಿಳಿಸಿದರು.
ಜಿಲ್ಲಾ ಕ್ವೆಸ್ಟ್ ಸಂಯೋಜಕಿ ಗ್ಲೋರಿ ವಿಕ್ಟರ್ ಅಧ್ಯಕ್ಷತೆ ವಹಿಸಿದ್ದರು. ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಕಾರ್ಯದರ್ಶಿ ಎ.ಎಸ್.ಸುಮಾ, ಖಜಾಂಚಿ ಕೆ.ಸಿ.ನಾಗರಾಜ್, ಕ್ವೆಸ್ಟ್ ಸಂಯೋಜಕ ಜಿಯಾವುಲ್ಲಾಖಾನ್, ಪ್ರೇಮಾ ಮತ್ತಿತರರು ಪಾಲ್ಗೊಂಡರು.
ಸಮಾರೋಪ:
ತರಬೇತಿ ಶಿಬಿರದಲ್ಲಿ 39 ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡಿದ್ದು, ಶನಿವಾರ ಸಂಜೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಲಯನ್ಸ್ ಮುಖಂಡರಾದ ಬಿ.ಎಸ್.ರಾಜಶೇಖರಯ್ಯ, ಸಿ.ಕೆ.ಕೃಷ್ಣಮೂರ್ತಿ, ಪ್ರಿಯಾ ಅಜಿತ್ ಮತ್ತಿತರರು ಭಾಗವಹಿಸಲಿದ್ದಾರೆ.

