ಚಂದ್ರವಳ್ಳಿ ನ್ಯೂಸ್, ಕಾರವಾರ (ಉತ್ತರ ಕನ್ನಡ):
ಕರ್ನಾಟಕ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಬ್ಬರೂ ಮ್ಯೂಸಿಕಲ್ ಚೇರ್ ಆಟವಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯನವರನ್ನೇ ಸಿಎಂ ಅಂತ ಅನ್ಕೊಂಡಿದ್ವಿ. ಆದ್ರೆ ರಾಜ್ಯದಲ್ಲಿ ಸೂಪರ್ ಸಿಎಂ ಇದ್ದಾರೆ, ಸುರ್ಜೇವಾಲ ಎನ್ನುವ ವ್ಯಕ್ತಿ ಸೂಪರ್ ಸಿಎಂ ಆಗಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಹರಿಹಾಯ್ದರು. ಕುಮಟಾದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ತಮ್ಮ ಕ್ಷೇತ್ರಕ್ಕೆ ಅನುದಾನ ಸಿಗಬೇಕೆಂದರೆ ಸುರ್ಜೇವಾಲಾ ಹತ್ತಿರ ಶಾಸಕರು ಹೋಗಬೇಕಿದೆ. ಒಬ್ಬರು ಸಿಎಂ ಕುರ್ಚಿ ಉಳಿಸಿಕೊಳ್ಳಬೇಕು ಅಂತ, ಇನ್ನೊಬ್ಬರು ಸಿಎಂ ಆಗಬೇಕೆಂಬ ಹಂಬಲವಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದ ಡಿಸಿಎಂ ಇವರನ್ನು ಖಾಲಿ ಮಾಡಿಸಿ ತಾವು ಕುಳಿತುಕೊಳ್ಳುವ ಪ್ಲಾನ್ ನಡೀತಿದೆ ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕರ ಮ್ಯೂಸಿಕಲ್ ಚೇರ್ ಆಟಕ್ಕೆ ರಾಜ್ಯದ ಜನ ಬಲಿಯಾಗುತ್ತಿದ್ದಾರೆ. ಜನಗಳಿಗೆ ತೆರಿಗೆ ಹಾಕಿ ಲೂಟಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮುಂಬರುವ ಚುನಾವಣೆಗೆ ನಿಲ್ಲುವ ಬಗ್ಗೆ ಆಲೋಚನೆ ಮಾಡಿಲ್ಲ. ಕುಮಾರಣ್ಣ ರಾಜ್ಯದ ಮುಖ್ಯಮಂತ್ರಿ ಆಗಬೇಕು. ನನ್ನ ಹೋರಾಟ ಜೆಡಿಎಸ್ ಕಟ್ಟಬೇಕು, ಪಕ್ಷವನ್ನು ದಡ ಮುಟ್ಟಿಸುವುದೇ ನನ್ನ ಆದ್ಯ ಕರ್ತವ್ಯ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕುಮಟಾದಲ್ಲಿ ಸೂರಜ್ ಸೋನಿ ನಾಯಕ್ ಅವರ ಸೋಲನ್ನು ಸೋಲು ಅಂತ ಭಾವಿಸುವುದಕ್ಕೆ ಸಾಧ್ಯವಿಲ್ಲ. ಅದು ನಿಜಕ್ಕೂ ಕೂಡ ಸೋಲಲ್ಲ. ಇಡೀ ನಗರದಲ್ಲಿ ರ‍್ಯಾಲಿ ಮಾಡುವ ವೇಳೆ ಪ್ರತಿಯೊಬ್ಬ ಕಾರ್ಯಕರ್ತರ ಹೆಸರನ್ನು ಬಾಯಲ್ಲಿ ಹೇಳ್ತಾರೆ, ಇದೇ ಅವರ ನಿಜವಾದ ಗೆಲುವು ಎಂದರು.
ಗ್ರಾಮ ಪಂಚಾಯಿತಿ ರಾಜಕಾರಣದ ಬೇರು ಇದ್ದಂತೆ. ಕಾರ್ಯಕರ್ತರು ಪಕ್ಷದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಬಲ ತುಂಬುವಂತಹ ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ದೃತಿಗೆಡಬೇಡಿ. ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಬೇಡ, ನಿಮ್ಮ ಸಂಘಟನೆ ನೀವು ಮಾಡಿ, ಕುಮಾರಣ್ಣ ಅವರು ಈಗಾಗಲೇ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.
ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ, ಒಂದಲ್ಲ ಹಲವಾರು ಬಾರಿ ಕುಮಟಾ ಕ್ಷೇತ್ರಕ್ಕೆ ನಾನು ಬರುತ್ತೇನೆ. ಸೂರಜ್ ಸೋನಿ ನಾಯಕ್ ಅವರು ನೂರಕ್ಕೆ ನೂರು ಜನರ ಪ್ರೀತಿ ಗಳಿಸಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಪಕ್ಷ ಸಂಘಟನೆ ಮಾಡಿದರೆ ಖಂಡಿತ ನಾಯಕ್ ಅವರು ಶಾಸಕರಾಗುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕುಮಟಾ ತಾಲೂಕಿನಲ್ಲಿ ಅತೀ ಹೆಚ್ಚು ಮೀನುಗಾರರಿದ್ದಾರೆ. ಸದ್ಯ ಅವರಿಗೆ ಶೀಥಲೀಕರಣ ಘಟಕ (ಕೋಲ್ಡ್ ಸ್ಟೋರೇಜ್ ) ಅವಶ್ಯಕತೆ ಇದೆ. ಈ ಕೂಡಲೇ ಸರ್ಕಾರ ಅವರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ಮೀನುಗಾರರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇಲ್ಲಿನ ಜನತೆ ಯಾವುದೇ ಗ್ಯಾರಂಟಿಯನ್ನು ನಂಬಿಕೊಂಡು ಜೀವನ ಮಾಡುತ್ತಿಲ್ಲ. ಶಾಶ್ವತ ಪರಿಹಾರವನ್ನು ಮೀನುಗಾರರಿಗೆ ಒದಗಿಸಬೇಕು. ಈ ಕೂಡಲೇ ಸರ್ಕಾರ ಮೀನುಗಾರರ ಜತೆ ಸಭೆ ಮಾಡಿ ಅವರಿಗೆ ಸೂಕ್ತ ಪರಿಹಾರ ಒದಗಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಆಗ್ರಹಿಸಿದರು.
ಈ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಕಾರಣ ಉತ್ತರ ಕನ್ನಡ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ. ನೂರಾರು ಕಿಲೋ ಮೀಟರ್ ದೂರವಿರುವ ಅಕ್ಕಪಕ್ಕದ ಜಿಲ್ಲೆಗಳನ್ನು ಚಿಕಿತ್ಸೆಗಾಗಿ ಆಶ್ರಯಿಸಬೇಕಾಗಿದೆ. ಇಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ಸರ್ಕಾರ ಯಾವುದೇ ಚಿಂತನೆ ಮಾಡಿಲ್ಲ. ಇತಿಹಾಸದಲ್ಲೇ ಇಂಥ ಕೆಟ್ಟ ಸರ್ಕಾರ ನೋಡಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

