ಅಡುಗೆ ಎಣ್ಣೆ ಕಲಬೆರಕೆ, ಮರುಬಳಕೆ ನಿಲ್ಲಿಸಲು ಆಯುಕ್ತರು ಸೂಚನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೋಟೆಲ್‍ಗಳು ಹಾಗೂ ಇನ್ನಿತರ ಕ್ಯಾಟರಿಂಗ್ ಕೇಂದ್ರಗಳು ಕಡಿಮೆ ಟ್ರಾನ್ಸ್ ಕೊಬ್ಬು ಇರುವ ಅಡುಗೆ ಎಣ್ಣೆಯನ್ನು ಉಪಯೋಗಿಸಿ ಆಹಾರ ತಯಾರಿಸಬೇಕು ಹಾಗೂ ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡದೆ ವಿಲೇವಾರಿ ಮಾಡಬೇಕೆಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಆಯುಕ್ತರು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಈ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಡುಗೆ ಎಣ್ಣೆಯನ್ನು ಸುರಕ್ಷಿತ ರೀತಿಯಲ್ಲಿ ಬಳಕೆ ಮಾಡಬೇಕು. ಇದರ ಉತ್ಪಾದನೆ, ಪ್ಯಾಕೇಜಿಂಗ್, ಲೇಬಲಿಂಗ್ ಮುಂತಾದವುಗಳ ಕುರಿತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

- Advertisement - 

ಸಭೆಯಲ್ಲಿ ಆಯುಕ್ತರು ಎಲ್ಲಾ ಅಡುಗೆ ಎಣ್ಣೆ ಉತ್ಪಾದನಾ ಘಟಕಗಳ ಮಾಲೀಕರಿಗೆ ಶುಚಿತ್ವ ಕಾಪಾಡಿ, ಎಫ್‍ಎಸ್‍ಎಸ್‍ಎಐ ಮಾನದಂಡದಂತೆ ಸೂಕ್ತ ಲೇಬಲ್‍ನೊಂದಿಗೆ ವಿಟಮಿನ್ ಎ ಮತ್ತು ಡಿ ಹೊಂದಿದ ಅಡುಗೆ ಎಣ್ಣೆಯನ್ನೇ ಮಾರಾಟ ಮಾಡಲು ಸೂಚಿಸಿದರು. ಅಲ್ಲದೆ ಉತ್ಪಾದಿತ ಅಡುಗೆ ಎಣ್ಣೆಯನ್ನು ಮಾಲೀಕರು ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲನೆಗೆ ಸಹ ಒಳಪಡಿಸಿಕೊಳ್ಳಬೇಕೆಂದರು.

ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಕ್ಯಾನ್ಸರ್ ತಜ್ಞ ಡಾ. ವಿಶಾಲ್‍ರಾವ್, ಎಲ್ಲಾ ಬೇಕರಿ ಉತ್ಪನ್ನ ಮತ್ತು ಅಡುಗೆ ತಯಾರಿಕರು ಕಡಿಮೆ ಟ್ರಾನ್ಸ್ ಕೊಬ್ಬಿನಿಂದ ತಯಾರಾದ ಅಡುಗೆ ಎಣ್ಣೆಯನ್ನು ಉಪಯೋಗಿಸುವುದು ಉತ್ತಮ. ಇದರಿಂದ ಹೃದಯ ಹಾಗೂ ಇತರ ಮಾರಣಾಂತಿಕ ಕಾಯಿಲೆಗಳಿಂದ ನಾವು ದೂರವಿರಬಹುದು ಎಂದರು.

- Advertisement - 

ಅಡುಗೆ ಎಣ್ಣೆ ಮರುಬಳಕೆ ಏಜೆನ್ಸಿ (ಆರ್‍ಯುಸಿಓ) ಮಾಲೀಕರು ಆಯುಕ್ತರಿಗೆ ಮಾಹಿತಿ ನೀಡುತ್ತಾ 2024-25 ಹಾಗೂ 2025-26ನೇ ಸಾಲುಗಳಲ್ಲಿ ಒಟ್ಟು 32,68,990 ಲೀಟರ್ ಉಪಯೋಗಿಸಿದ ಅಡುಗೆ ಎಣ್ಣೆ ಶೇಖರಣೆಯಾಗಿದ್ದು, ಇವುಗಳನ್ನು ಜೈವಿಕ ಡೀಸೆಲ್ ಉತ್ಪಾದನಾ ಘಟಕಕ್ಕೆ ನೀಡಬಹುದಾಗಿದೆ. ನೋಂದಿತ ಏಜೆನ್ಸಿಗಳು ಈ ಕುರಿತು ಕ್ರಮಕೈಗೊಳ್ಳಬಹುದೆಂದು ಸಲಹೆ ನೀಡಿದರು. ಆಯುಕ್ತರು ಹೋಟೆಲ್ ಸಂಘದ ಸದಸ್ಯರಿಗೆ ಬಳಸಿದ ಅಡುಗೆ ಎಣ್ಣೆಯನ್ನು ರುಕೋ ಏಜೆನ್ಸಿಗಳಿಗೆ ನೀಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಹೋಟೆಲ್ ಮಾಲಿಕರ ಮತ್ತು ಬೇಕರಿ ಅಡುಗೆ ತಯಾರಕಾ ಸಂಸ್ಥೆಗಳ ಪದಾಧಿಕಾರಿಗಳು, ನೋಂದಿತ ರುಕೋ ಏಜೆನ್ಸಿ ಮಾಲಿಕರು ಹಾಗೂ ಕರ್ನಾಟಕ ರಾಜ್ಯ ಜೈವಿಕ ಡೀಸೆಲ್ ಅಭಿವೃದ್ಧಿ ಮಂಡಳಿಯವರು ಹಾಜರಿದ್ದರು.  

Share This Article
error: Content is protected !!
";