ಎಲ್ಲಾ ಪೋಷಕಾಂಶಗಳುಳ್ಳ ತಾಯಿಯ ಎದೆ ಹಾಲೇ ಶ್ರೇಷ್ಠ-ಸಣ್ಣರಂಗಮ್ಮ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನೂ ಒದಗಿಸುವ ಪ್ರಾಕೃತಿಕ ಆಹಾರವೆಂದರೆ ತಾಯಿಯ ಹಾಲು ಎಂದು ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ಹೇಳಿದರು.

ನಗರದ ನೆಹರು ಮೈದಾನದಲ್ಲಿರುವ ಗೋಪಾಲಪುರ-3ನೇ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

- Advertisement - 

ಹಾಲಿನ ಉಷ್ಣತೆ ಮತ್ತು ರುಚಿಯಿಂದ ಹಿಡಿದು ಪೋಷಕಾಂಶದವರೆಗೆ ಯಾವುದಕ್ಕೂ ಯೋಚಿಸುವ ಅಗತ್ಯವಿಲ್ಲದಂಥ ಸಿದ್ಧ ಆಹಾರವಿದು. ಮೊದಲ ಹಾಲು ಅಥವಾ ಕೊಲಾಸ್ಟ್ರಮ್‌ನಿಂದ ತೊಡಗಿ ಕಾಲಕಾಲಕ್ಕೆ ಬೆಳೆಯುತ್ತಾ ಬರುವ ಶಿಶುವಿನ ಜಠರದ ಸಾಮರ್ಥ್ಯಕ್ಕೆ ಹೊಂದುವಂತೆ ತಾಯಿಯ ಹಾಲೂ ಒದಗಿ ಬರುತ್ತದೆ ಎಂದು ಅವರು ತಿಳಿಸಿದರು.

ಶಿಶುವಿನ ಆರಂಭಿಕ ದಿನಗಳಲ್ಲಿ ಅಗತ್ಯವಾಗಿ ಬೇಕಾದ ರೋಗನಿರೋಧಕ ಶಕ್ತಿಯನ್ನು ತಾಯಿಯ ಎದೆ ಹಾಲು ನೀಡುತ್ತದೆ. ಅದರಲ್ಲೂ ಮೊದಲೆರೆಡು ದಿನಗಳು ಮಗುವಿಗೆ ಸಿಗುವ ಕೊಲಾಸ್ಟ್ರಮ್‌ನಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ.

- Advertisement - 

ಮಗುವಿನ ಮೂಗು, ಗಂಟಲು ಮತ್ತು ಜೀರ್ಣಾಂಗಗಳಲ್ಲಿ ರಕ್ಷಾಕವಚವನ್ನು ಕೊಲಾಸ್ಟ್ರಮ್‌ನಲ್ಲಿರುವ ಇಮ್ಯುನೊಗ್ಲೋಬುಲಿನ್‌ಗಳು ನಿರ್ಮಿಸುತ್ತವೆ. ಜೊತೆಗೆ, ತಾಯಿಯ ದೇಹದಲ್ಲಿ ಉತ್ಪಾದನೆಯಾಗುವ ಪ್ರತಿಕಾಯಗಳು ಸುಲಭವಾಗಿ ಮಗುವಿನ ದೇಹಕ್ಕೆ ಹಾಲಿನ ಮೂಲಕ ವರ್ಗಾವಣೆಯಾಗುತ್ತವೆ ಎಂದು ಸಣ್ಣರಂಗಮ್ಮ ತಿಳಿಸಿದರು.

ತಾಯಿಯ ಹಾಲಿನಿಂದ ಕಿವಿ ಸೋಂಕು, ಶ್ವಾಸನಾಳದ ಸೋಂಕು, ಜೀರ್ಣಾಂಗದ ಸಮಸ್ಯೆಗಳು, ಅಲರ್ಜಿಗಳು, ಬಾಲ್ಯದ ಮಧುಮೇಹ ಮುಂತಾದ ಹತ್ತು-ಹಲವು ಸಮಸ್ಯೆಗಳನ್ನು ದೂರ ಮಾಡಬಹುದು ಎಂದು ಅವರು ಹೇಳಿದರು.

ಪುಟ್ಟ ಮಕ್ಕಳ ತೂಕ ಹೆಚ್ಚಿದ್ದರೂ ಸಮಸ್ಯೆ, ಕಡಿಮೆ ಇದ್ದರೂ ತೊಂದರೆ. ಆದರೆ ಕೂಸು ಮೊದಲೊಂದು ವರ್ಷ ತಾಯಿಯ ಹಾಲುಣ್ಣುವುದರಿಂದ ತೂಕ ಹೆಚ್ಚಳ ಸಮರ್ಪಕ ವಾಗಿರುತ್ತದೆ. ಮೊದಲಾರು ತಿಂಗಳ ನಂತರ ಕ್ರಮೇಣ ಘನ ಆಹಾರಗಳನ್ನು ಶಿಶುವಿಗೆ ನೀಡ ಬಹುದು. ಆದರೆ ತಾಯಿಯ ಹಾಲನ್ನು ಕೂಸಿಗೆ ನಿಲ್ಲಿಸುವಂತಿಲ್ಲ. ಸ್ತನ್ಯಪಾನ ಮಾಡುವ ಶಿಶುಗಳು ತಮಗೆ ಹೊಟ್ಟೆ ತುಂಬಿದ ತಕ್ಷಣ ಕುಡಿಯುವುದನ್ನು ತಾವೇ ನಿಲ್ಲಿಸಿಬಿಡುತ್ತದೆ ಎಂದು ಮೇಲ್ವಿಚಾರಕಿ ಸಣ್ಣ ರಂಗಮ್ಮ ತಿಳಿಸಿದರು.

ಮನ್ವಿ ಟ್ರಸ್ಟ್ ನ ಮಾನಸ ಮಾತನಾಡಿ ತಾಯಿಯ ಎದೆ ಹಾಲು ಹಲವು ರೋಗಗಳನ್ನು ತಡೆಯುತ್ತದೆ. ಗರ್ಭಕೋಶದ ಕ್ಯಾನ್ಸರ್, ಅಪೌಷ್ಟಿಕತೆ ನೀಗಿಸುತ್ತದೆ ಎಂದು ಮಾನಸ ಹೇಳಿದರು.

ಮಹಿಳಾ ಆರೋಗ್ಯ ಕಾರ್ಯಕರ್ತೆ ಇಂದಿರಮ್ಮ, ಅಂಗನವಾಡಿ ಕಾರ್ಯಕರ್ತೆರಾದ ಉಷಾ, ಸುಂದರಮ್ಮ, ಶ್ವೇತಾ, ಗುಲಾಬ್, ಗಂಗಮ್ಮ, ಆಶಾ ಕಾರ್ಯಕರ್ತೆಯರಾದ ಗಾಯಿತ್ರಮ್ಮ, ಆಶಾ ಮತ್ತಿತರರು ಇದ್ದರು. 

 

 

 

Share This Article
error: Content is protected !!
";