ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಿಹಳ್ಳಿಗೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಆಗಮಿಸಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಅರ್ಕಾವತಿ ನದಿ ನೀರು ಹೋರಾಟ ಸಮಿತಿ ಸದಸ್ಯರು, ಬಾಶೆಟ್ಟಿಹಳ್ಳಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದ ಹೊರಬರುವ ರಾಸಾಯಿನಿಕ ನೀರು ನಮ್ಮ ಕೆರೆಗಳಿಗೆ ಕೊಳಚೆ ನೀರು ನದಿಯಂತೆ ಹರಿಯುತ್ತಿದ್ದು, ಈ ಕೊಳಚೆ ನೀರಿನ ನದಿಗೆ ಒಂದು ಹೆಸರಿಡುವಂತೆ ಭಿತ್ತಿ ಪತ್ರ ಪ್ರದರ್ಶಿಸುವ ಮೂಲಕ ಸ್ವಾಗತಿಸಿ ಗಮನ ಸೆಳೆದರು.
ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯರಾದ ವಸಂತಕುಮಾರ್, ಸತೀಶ್, ಮಜರಾ ಹೊಸಹಳ್ಳಿ, ದೊಡ್ಡತುಮಕೂರು ಕೆರೆಗಳಿಗೆ ಬಾಶೆಟ್ಟಿಹಳ್ಳಿ, ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಿಂದ ಹರಿದು ಬರುತ್ತಿರುವ ಒಳಚರಂಡಿ ನೀರಿನಿಂದ ಈ ಭಾಗದ ಎರಡು ಗ್ರಾಪಂ ವ್ಯಾಪ್ತಿಯ 17 ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯ ದಂತಾಗಿದೆ.
ದೊಡ್ಡಬಳ್ಳಾಪುರದಲ್ಲಿ ಕಾರ್ಯನಿರ್ವಹಿಸ ಬೇಕಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಕಛೇರಿ ಕಾರ್ಯ ನಿರ್ವಹಿಸದೇ ಇರುವುದೇ ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣ. ಒಳಚರಂಡಿ ಕೊಳಚೆ ನೀರನ್ನು 3 ಹಂತದಲ್ಲಿ ಶುದ್ದೀಕರಿಸು ವಂತೆ ಹಲವಾರು ವರ್ಷಗಳಿಂದ ಮನವಿ ಮಾಡುತ್ತಲೇ ಬರುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರ್ಕಾವತಿ ನದಿ ಹೋರಾಟ ಸಮಿತಿಯ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಶಾಸಕ ಧೀರಜ್ ಮುನಿರಾಜ್, ಒಳಚರಂಡಿ ನೀರಿನ ಸಮಸ್ಯೆ ತೀವ್ರವಾಗಿದೆ. ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪನೆಗೆ 57 ಕೋಟಿ ರೂ. ನೀಡಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ಶುದ್ದೀಕರಣ ಘಟಕ ಸ್ಥಾಪನೆಗೆ ಜಮೀನು ಖರೀದಿಗೆ ಹಣದ ಕೊರತೆ ಇದೆ. ಈ ಎಲ್ಲಾ ಸಮಸ್ಯೆಗಳ ಕುರಿತಂತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಆ.5 ರಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಇಲಾಖೆ ಹಾಗೂ ಹೋರಾಟ ಸಮಿತಿ ಸದಸ್ಯರ ಸಭೆ ನಡೆಸಲಾಗುತ್ತಿದೆ ಎಂದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಕೊಳಚೆ ನೀರು ಶುದ್ದೀಕರಣ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಕಡೆಯಿಂದ ಆಗಬೇಕಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಗಳ ಆಧಾರದ ಮೇಲೆ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಇದ್ದರು.
“ಇಲ್ಲಿನ ಕಾಲುವೆಗಳಲ್ಲ ಕೈಗಾರಿಕಾ ರಸಾಯಾನಿಕ ನೀರಿ ಜೊತೆ ದೊಡ್ಡಬಳ್ಳಾಪುರ ನಗರ ಸಭೆ ಹಾಗು ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿಯ ಮೂಲ ಮೂತ್ರ ಸೇರಿ ಅರ್ಕಾವತಿ ನದಿ ಕೊಳಚೆ ಎದ್ದು ನಾರುತ್ತಿದೆ ಈ ಬಾಗದ ನೀರು ಪಾವಿತ್ರ್ಯತೆ ಕಳೆದು ಕೊಂಡಿದೆ ವಾಯು ಮಲಿನ
ಹಾಗು ಜಲ ಮಲಿನ ಪರಿಸರ ಹಾಗು ನೀರು ಸಹ ಮಲಿನ ವಾಗಿ ಈ ಬಾಗದಲ್ಲಿ ಇರುವಂತಹ ಜನರು ಯಾವರೀತಿ ಜೀವನ ಸಾಗಿಸಬೇಕು ಎಂಬುದು ಜನ ಪ್ರತಿನಿಧಿಗಳು ಹಾಗು ಅದಿಕಾರಿಗಳು ಆರಿತು ನಮಗೆ ಈ ನೀರನ್ನ ಶುದ್ದಿಕರಿಸುವಂತೆ ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ಪ್ರಯೋಜನವಾಗಿಲ್ಲ”.
ವಸಂತ ಕುಮಾರ, ಅರ್ಕಾವತಿ ಹೋರಾಟ ಸಮಿತಿಯ ಮುಖ್ಯಸ್ಥ.

