ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಲ್ಲಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನಿಂದ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಾಸಿಕ ಉಚಿತ ಕಣ್ಣಿನ ಐಓಎಲ್ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಲಯನ್ಸ್ ಜಿಲ್ಲೆ 317ಎಫ್‌ನ ದೃಷ್ಟಿ ವಿಭಾಗದ ಸಂಯೋಜಕ ಅಜಿತ್‌ಬಾಬು ಚಾಲನೆ ನೀಡಿದರು.
ಅವರು ಮಾತನಾಡಿ, ಜಾಲಪ್ಪ ಲಯನ್ಸ್ ಸಂಸ್ಥೆಯಿಂದ ಈ ತಿಂಗಳು ದೃಷ್ಠಿದೋಷವುಳ್ಳ 35 ಫಲಾನುಭವಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ಐಒಎಲ್ ಅಳವಡಿಕೆ ಮಾಡುತ್ತಿರುವುದು ಗಣನೀಯವಾಗಿದೆ. ಕ್ಲಬ್‌ನ ವತಿಯಿಂದ ದೃಷ್ಟಿದೋಷ ನಿವಾರಣೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಯೋಜನೆಗಳು ಜಾರಿಯಲ್ಲಿದ್ದು, ನಿಸ್ವಾರ್ಥ ಸೇವೆಯನ್ನು ಒದಗಿಸಲಾಗುತ್ತಿದೆ. ಸೇವಾ ಚಟುವಟಿಕೆಗಳ ವಿಸ್ತರಣೆಗೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಫಲಾನುಭವಿಗಳನ್ನು ಐಒಎಲ್ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಶ್ರೀ ದೇವರಾಜ ಅರಸ್ ವೈದ್ಯಕೀಯ ಶಿಕ್ಷಣ ಸಂಸ್ಥೆಯ ವಾಹನದಲ್ಲಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಬೀಳ್ಕೊಡಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಕ್ಲಬ್ ಖಜಾಂಚಿ ಕೆ.ಸಿ.ನಾಗರಾಜ್, ಜಿಲ್ಲಾ ದೃಷ್ಟಿ ವಿಭಾಗದ ಸದಸ್ಯರಾದ ಮನೋಜ್ ಕುಮಾರ್, ಎ.ಕೆ.ಸುರೇಶ್ ಮತ್ತಿತರರು ಭಾಗವಹಿಸಿದ್ದರು.

