ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಅವರನ್ನು ಹಿರಿಯೂರು ತಾಲೂಕಿನ ರೈತ ಸಂಘದ ನಿಯೋಗ ಬೆಂಗಳೂರು ಶಾಂತಿನಗರ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಹಿರಿಯೂರು ತಾಲೂಕು ಗ್ರಾಮೀಣ ಸಾರಿಗೆ ಡಿಪೋ ಪ್ರಾರಂಭಿಸಿ ಬಸ್ಸುಗಳನ್ನು ಓಡಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ರೈತರಿಗೆ ಮಹಿಳೆಯರಿಗೆ ಅತಿ ಹೆಚ್ಚು ಅನುಕೂಲ ಮಾಡಬೇಕು ಎಂದು ಅನೇಕ ಬಾರಿ ಹೋರಾಟ ಮಾಡಲಾಗಿದ್ದರೂ ಡಿಪೋ ಆರಂಭಿಸದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ.
ಹಿರಿಯೂರು ಡಿಪೋ ಕಟ್ಟಡ ಸಂಪೂರ್ಣ ಮುಗಿದಿದೆ ಎಲ್ಲಾ ಪೀಠೋಪಕರಣಗಳು ಬಂದಿದ್ದು ಡೀಸೆಲ್ ಬಂಕಿನಲ್ಲಿ ಡೀಸೆಲ್ ಕೂಡ ಬಂದು ನಾಲ್ಕೈದು ತಿಂಗಳಾಗಿದೆ. ಇದುವರೆಗೂ ಗ್ರಾಮೀಣ ಸಾರಿಗೆ ಡಿಪೋ ಪ್ರಾರಂಭಿಸದೆ ಇಲ್ಲದ ಸಬೂಬುಗಳನ್ನು ಹೇಳುತ್ತಾ ಕಾಲಹರಣ ಮಾಡಲಾಗಿದೆ. ಆದ್ದರಿಂದ ತುರ್ತಾಗಿ ಡಿಪೋ ಆರಂಭಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿದ ಅಕ್ರಮ್ ಪಾಷಾ ಅವರು ಅಧಿವೇಶನದ ಒಳಗಾಗಿ ಪ್ರಾರಂಭ ಮಾಡಲು ಪ್ರಯತ್ನಿಸುತ್ತೇವೆ. ಆಗದಿದ್ದರೆ ಅಧಿವೇಶನ ಮುಗಿದ ತಕ್ಷಣ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದರು.
ಈ ತಿಂಗಳ ಅಂತ್ಯದೊಳಗಾಗಿ ಡಿಪೋ ಪ್ರಾರಂಭ ಮಾಡಿ ಗ್ರಾಮೀಣ ಭಾಗದಲ್ಲಿ ಬಸ್ಸುಗಳನ್ನು ಓಡಿಸದೆ ಇದ್ದರೆ ಕೇಂದ್ರ ಕಚೇರಿ ಮುಂದೆ ಹಿರಿಯೂರು ತಾಲೂಕು ರೈತ ಸಂಘಟನೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತರ ನಿಯೋಗ ಎಚ್ಚರಿಸಿತು.
ನಿಯೋಗದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ರಂಗಸ್ವಾಮಿ, ಸಣ್ಣ ತಿಮ್ಮಣ್ಣ, ಜಯಣ್ಣ, ಈಶ್ವರಪ್ಪ, ಶಿವಣ್ಣ, ದಿಂಡವರ ಗಿರೀಶ್, ವಿರೂಪಾಕ್ಷಿ, ರಘುನಾಥ್ ಗೌಡ, ಜಗದೀಶ್, ಲಕ್ಷ್ಮಿಪತಿ ಮುಂತಾದವರು ಇದ್ದರು.

