ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮತಗಳ್ಳತನದ ಪಿತಾಮಹ ಯಾರಪ್ಪ ಅಂದರೆ ಅದು ಲಾಟರಿ ಸಿಎಂ ಸಿದ್ದರಾಮಯ್ಯ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.
“2018 ರ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲುವ ಹಂತದಲ್ಲಿದ್ದರು. ಆಗ ನಾನು ಮತ್ತು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ಮತಗಳನ್ನು ಖರೀದಿ ಮಾಡಿದ್ದೆವು” ಎಂದು ಸಿದ್ದರಾಮಯ್ಯ ಅವರ ಆಪ್ತ, ಸಿ.ಎಂ.ಇಬ್ರಾಹಿಂ ಹೇಳಿರುವುದು ಮತಗಳ್ಳತನದ ಪಿತಾಮಹ ಯಾರು ಎಂಬುದನ್ನ ಸಾಬೀತುಪಡಿಸಿದೆ.
“ಕೌಂಟಿಂಗ್ ದಿನ ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದರು. ಆಗ ನಾನು ಮ್ಯಾನೇಜ್ ಮಾಡಿದ್ದೇನೆ, 800-1000 ವೋಟುಗಳ ಚಿಕ್ಕ ಅಂತರದಲ್ಲಿ ಗೆಲ್ಲುತ್ತೀರಿ ಎಂದು ಹೇಳಿದ್ದೆ. ಆರು ತಿಂಗಳ ನಂತರ ಸಿದ್ದರಾಮಯ್ಯ ಆ ಸಾಲವನ್ನು ವಾಪಸ್ ಕೊಟ್ಟರು” ಎಂದೂ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, 2018ರಲ್ಲಿ ನಿಮ್ಮ ದುರಾಡಳಿತ, ಭ್ರಷ್ಟಾಚಾರಕ್ಕೆ ಬೇಸತ್ತು ಕರ್ನಾಟಕದ ಜನತೆ ನಿಮ್ಮ ಸಂಪುಟದ 10 ಸಚಿವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದರು. ನೀವು ಕೂಡಾ ಭಯದಿಂದ ಎರಡು ಕಡೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಿರಿ.
ಸಿ.ಎಂ. ಇಬ್ರಾಹಿಂ ಅವರು ಹೇಳಿದಂತೆ 2018ರಲ್ಲಿ ನೀವು ಮತಗಳ್ಳತನ ಮಾಡಿ ಗೆಲ್ಲದೇ ಹೋಗಿದ್ದರೆ, ನಂತರ 2019 ರಲ್ಲಿ ವಿಪಕ್ಷ ನಾಯಕರೂ ಆಗುತ್ತಿರಲಿಲ್ಲ, ಈಗ ಮತ್ತೊಮ್ಮೆ ಮುಖ್ಯಮಂತ್ರಿಗಳೂ ಆಗುತ್ತಿರಲಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.
ಮತಗಳ್ಳತನ ಮಾಡಿ ಗೆದ್ದ ನಿಮಗೆ ಸಿಎಂ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯಲು ಹಕ್ಕಿಲ್ಲ. ನಿಮಗೆ ಕಿಂಚಿತ್ತಾದರೂ ನೈತಿಕತೆ ಆತ್ಮಸಾಕ್ಷಿ ಇದ್ದರೆ, ರಾಜೀನಾಮೆ ಕೊಟ್ಟು ರಾಜ್ಯದ ಜನತೆಯ ಕ್ಷಮೆ ಕೇಳಿ ಎಂದು ವಿಪಕ್ಷ ನಾಯಕ ಅಶೋಕ್ ತಾಕೀತು ಮಾಡಿದರು.

