ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಧುಗಿರಿಯಲ್ಲಿ ರಾಜಣ್ಣ ಅಭಿಮಾನಿಗಳು ಪ್ರತಿಭಟನೆ ಹಾದಿ ತುಳಿದಿದ್ದರೆ, ಬೆಂಗಳೂರಿನಲ್ಲಿ ಬಿಜೆಪಿಗೆ ರಾಜಣ್ಣರನ್ನು ವಜಾ ಮಾಡಿದ್ದೇ ಅಸ್ತ್ರವಾಗಿ ಸಿಕ್ಕಿದೆ. ಇದೇ ವೇಳೆ ಅಧಿವೇಶನದಲ್ಲಿ ಬಿಜೆಪಿ ಆಡಳಿತ ರೂಢ ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕಿದ್ದು ರಾಜಣ್ಣ ವಜಾ ಮಾಡಿದ್ದೇಕೆ? ಎಂದು ಸದನದಲ್ಲಿ ಉತ್ತರಕ್ಕೆ ಪಟ್ಟುಹಿಡಿದಿದೆ.
ವಿಧಾನಸಭೆ ಕಲಾಪದ ಆರಂಭದಲ್ಲಿ, ಅಂದರೆ ಪ್ರಶ್ನೋತ್ತರ ವೇಳೆ ಶುರುವಾಗುವ ಮುನ್ನ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ರಾಜಣ್ಣರನ್ನು ವಜಾ ಮಾಡಿದ್ದೇಕೆ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕೆಂದು ಆಗ್ರಹಿಸಿದರು.
ಈ ವೇಳೆ, ಸ್ಪೀಕರ್ ಖಾದರ್ ಇದು ಅವರ ಪಕ್ಷದ ಆಂತರಿಕ ವಿಚಾರ ಎಂದಿದ್ದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇಷ್ಟಕ್ಕೆ ಸುಮ್ಮನಾಗದ ಆರ್.ಅಶೋಕ್, ಮತ ಕಳ್ಳತನದ ಕುರಿತು ರಾಜಣ್ಣ ಸತ್ಯ ಹೇಳಿದ್ದಾರೆ. ಸತ್ಯ ಹೇಳಿದ್ದಕ್ಕೆ ಅವರನ್ನು ಬಲಿ ಪಡೆದುಕೊಂಡಿದ್ದಾರೆಯೇ ಎಂದು ಅಶೋಕ್ ತೀಕ್ಷ್ಣವಾಗಿ ಸರ್ಕಾರವನ್ನು ಪ್ರಶ್ನಿಸಿದರು.
ವಿಧಾನ ಪರಿಷತ್ನಲ್ಲೂ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪತ್ರವನ್ನು ಓದಿದರು. ಇದಕ್ಕೆ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಭಾಪತಿ ಹೊರಟ್ಟಿ, ಪ್ರಶ್ನೋತ್ತರ ಕಲಾಪದ ಬಳಿಕ ಬಳಿಕ ಪ್ರಸ್ತಾಪಿಸುವಂತೆ ಸೂಚನೆ ನೀಡಿದರು. ಆಗ ಬಿಜೆಪಿ ಸದಸ್ಯರು ಈಗಲೇ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
ಇದೆಲ್ಲದರ ನಡುವೆ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿರುವಾಗ ಉತ್ತರ ನೀಡಲು ಎದ್ದು ನಿಂತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೋರಾಗಿ ಕೆಮ್ಮತೊಡಗಿದರು.
ಬಿಜೆಪಿ ಶಾಸಕ ಸುನಿಲ್ ಕುಮಾರ್ ಎದ್ದು ನಿಂತು ನೀವು ಕೆಮ್ಮಿದರೆ ಯಾರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿ ಕಾಲೆಳೆದರು.
ಸುನೀಲ್ ಕುಮಾರ್ ಮಾತಿಗೆ ಸದನ ನಗೆ ಗಡಲಲ್ಲಿ ತೇಲಿತು. ಏನೂ ಪ್ರತಿಕ್ರಿಯೆ ನೀಡದ ಡಿಕೆ ಶಿವಕುಮಾರ್ ಉತ್ತರ ಮುಂದುವರಿಸಿದರು.
ಸದನದ ಹೊರಗೂ ಮಾತನಾಡಿರುವ ಬಿಜೆಪಿ ನಾಯಕರು, ರಾಜಣ್ಣ ವಜಾ ಮಾಡುವಂಥ ಅಪರಾಧ ಏನು ಮಾಡಿದ್ದಾರೆ ಎಂದು ಉತ್ತರ ಹೇಳುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಆಗ್ರಹ ಮಾಡಿದ್ದಾರೆ.

